ಬೆಂಗಳೂರು: ಬೇಲೆಕೇರಿ ಬಂದರು ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ಮುಕ್ತಾಯವಾಗಿದ್ದು, ಸತೀಶ್ ಸೈಲ್ ಸೇರಿದಂತೆ ಆರೋಪಿಗಳು ದೋಷಿ ಎಂದು ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಶಿಕ್ಷೆಯನ್ನು ನಾಳೆ ಘೋಷಿಸುವುದಾಗಿ ಹೇಳಿದೆ. ಈ ಮಧ್ಯೆ ಶಾಸಕ ಸತೀಶ್ ಸೈಲ್ ಕಣ್ಣೀರು ಸುರಿಸಿದ್ದಾರೆ.
ಸೀಜ್ ಆಗಿದ್ದ ಅದಿರು 8 ಲಕ್ಷ ಮೆಟ್ರಿಕ್ ಟನ್ ಅದಿರಿನ ಪೈಕಿ 6 ಲಕ್ಷ ಮೆಟ್ರಿಲ್ ಟನ್ ನಾಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ದೋಷಿ ಎಂದು ಕೋರ್ಟ್ ಆದೇಶ ನೀಡಿತ್ತು. ವಿಚಾರಣೆ ವೇಳೆ ಕಣ್ಣೀರು ತುಂಬಿಕೊಂಡ ಸತೀಶ್ ಸೈಲ್, ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತ್ನಿಯೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನನಗೂ ಆರೋಗ್ಯದ ಸಮಸ್ಯೆಯಿದೆ. ಹೀಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಸತೀಶ್ ಸೈಲ್ ಪರ ವಾದಿಸಿದ ವಕೀಲ ಮೂರ್ತಿ ಡಿ ನಾಯ್ಕ್ , ಸತೀಶ್ ಸೈಲ್‌ರದ್ದು ವೈಯಕ್ತಿಕವಾಗಿ ಯಾವುದೇ ಪಾತ್ರವಿಲ್ಲ. ಅವರ ಕಂಪನಿಯ ಮೂಲಕ ಅದಿರಿನ ಸಾಗಾಟವನ್ನಷ್ಟೇ ಮಾಡಲಾಗಿದೆ. ಅದಿರು ರಫ್ತಿನಿಂದ ಬಂದ ಹಣಕ್ಕೆ ಆದಾಯ ತೆರಿಗೆ ಪಾವತಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿಲ್ಲ. ಕಳ್ಳತನ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಗರಿಷ್ಟ ಶಿಕ್ಷೆ 3 ವರ್ಷ ಶಿಕ್ಷೆಗೆ ಮಾತ್ರ ಅವಕಾಶವಿದೆ. ಹೀಗಾಗಿ 3 ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದರು.