ಕುಂದಾಪುರ: ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಅವರ ಸ್ನೇಹಿತರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಒಡ್ಡಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ತಾಲೂಕಿನ ಗಂಗೋಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಿಂದ ಪಡುಕೋಣೆ ಹಾಗೂ ಸುತ್ತಮುತ್ತಲಿನ ಜನರು ಬೆಚ್ಚಿ ಬಿದ್ದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಇಬ್ಬರು ಸಂಘರ್ಷಕ್ಕೊಳಗಾದ ಬಾಲಕರು ಸೇರಿದಂತೆ 13 ಜನರನ್ನು ಬಂಧಿಸಲಾಗಿದೆ. ಆಲೂರು ಹೊಯ್ಯಾಣ ನಿವಾಸಿ ಸಚಿನ್ (24), ಆಲೂರು ರಾಮೇಶ್ವರ ನಗರ ನಿವಾಸಿ ಶರತ್ ದೇವಾಡಿಗ (24), ಕೆಂಬೈಲು ನಿವಾಸಿಗಳಾದ ಕಾರ್ತಿಕ್ (22), ಹಾಗೂ ಕೀರ್ತಿಕ್ (20), ಪಡುಕೋಣೆ ನಿವಾಸಿ ಪ್ರಕಾಶ್ (20), ಪಡುಕೋಣೆಯ ಹನುಮಂತನಗರ ನಿವಾಸಿ ಜಗದೀಶ್ (31), ಪಡುಕೋಣೆ ರಾಮಮಂದಿರ ನಿವಾಸಿ ಗೌತಮ್ (23), ಪಡುಕೋಣೆ ನಿವಾಸಿ ಮಹೇಂದ್ರ ಪೂಜಾರಿ, ಹಡವು ನಿವಾಸಿ ಸಂತೋಷ್ ಮೊಗವೀರ, ರೋಶನ್ ಫೆರ್ನಾಂಡೀಸ್, ಆಲೂರು ನಿವಾಸಿ ಪ್ರಸಾದ್ ಆಚಾರ್ಯ (30) ಬಂಧಿತರು.
ಬಂಧಿತರಿಂದ ಪಿಸ್ತೂಲ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪಡುಕೋಣೆ ನಿವಾಸಿ ಶ್ರೀಕಾಂತ ಪೂಜಾರಿ ಹಡವು ಗ್ರಾಮದ ಮಹಾವಿಷ್ಣು ದೇವಸ್ಥಾನದ ಕ್ರಾಸ್ ಹತ್ತಿರ ಸಂಜೆ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ನುಗ್ಗಿದ ಆರೋಪಿಗಳು ಆಯುಧಗಳಿಂದ ಹಲ್ಲೆಗೆ ಯತ್ನಿಸಿ, ಬೆದರಿಕೆ ಹಾಕಿದ್ದಾರೆ.
ಪರಿಣಾಮ ಶಿವಕುಮಾರ್ ಹೆಬ್ಬಾರ್, ಮನು ಹೆಬ್ಬಾರ್ ಸೇರಿದಂತೆ ಹಲವರು ಗಾಯಗೊಂಡಿದ್ದರು. ಅಲ್ಲದೇ, ಬ್ಲಾಕ್ ಅಧ್ಯಕ್ಷ ಅರವಿಂದ ಪೂಜಾರಿಗೆ ಆರೋಪಿ ಸಚಿನ್ ಪೂಜಾರಿ ಪಿಸ್ತೂಲ್ ನ್ನು ಹಣೆಗೆ ಇಟ್ಟು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಹಲ್ಲೆಗೊಳಗಾಗಿರುವ ಶ್ರೀಕಾಂತ್ ಹಾಗೂ ಆರೋಪಿ ವಿಶ್ವನಾಥ್ ಸೇರಿದಂತೆ ಹಲವರ ಮಧ್ಯೆ ಹಳೆಯ ದ್ವೇಷವಿತ್ತು. ಹೀಗಾಗಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.