ಚನ್ನಪಟ್ಟಣ: ರಾಜ್ಯದಲ್ಲಿ ಉಪ ಚುನಾವಣೆಯ ಕಾವು ಜೋರಾಗಿದೆ. ಈಗಾಗಲೇ ಎನ್ ಡಿಎ ಹಾಗೂ ಕಾಂಗ್ರೆಸ್ ಎರಡೆರಡು ಕ್ಷೇತ್ರಗಳಿಗೆ ಟಿಕೆಟ್ ಪೈನಲ್ ಮಾಡಿವೆ. ಕಾಂಗ್ರೆಸ್ ನಿಂದ ನಿನ್ನೆಯಷ್ಟೇ ಟಿಕೆಟ್ ಫೈನಲ್ ಆಗಿದ್ದು, ಸಂಡೂರಿನಿಂದ ಅನ್ನಪೂರ್ಣ ಹಾಗೂ ಚನ್ನಪಟ್ಟಣದಿಂದ ಸಿ.ಪಿ. ಯೋಗೇಶ್ವರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿ, ಜೆಡಿಎಸ್ ಮಿತ್ರಪಕ್ಷಗಳ ನಾಯಕರ ಟಿಕೆಟ್ ಸಂಘರ್ಷದ ಲಾಭ ಮಾಡಿಕೊಂಡ ಕಾಂಗ್ರೆಸ್ ಯೋಗೇಶ್ವರ್ ಅವರನ್ನು ಸೆಳೆದು ಕಣಕ್ಕೆ ಇಳಿಸಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಸವನಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿ.ಪಿ. ಯೋಗೇಶ್ವರ್ ದೊಡ್ಡ ರ್ಯಾಲಿ ನಡೆಸಿದರು. ರೋಡ್ ಶೋ ಮೂಲಕ ಚನ್ನಪಟ್ಟಣ ತಾಲೂಕು ಕಚೇರಿಗೆ ಆಗಮಿಸಿದ ಸಿಪಿ ಯೋಗೇಶ್ವರ್ ಉಮೇದುವಾರಿಕೆ ಸಲ್ಲಿಸಿದರು. ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರು ಶಾಸಕರು ಭಾಗಿಯಾಗಿದ್ದರು.
ಸಂಡೂರು ಅಖಾಡದಿಂದ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ನಾಮಪತ್ರ ಸಲ್ಲಿಸಿದ್ದಾರೆ. ಸಂಡೂರಿನ ಎಪಿಎಂಸಿಯಿಂದ ತಾಲೂಕು ಕಚೇರಿವರೆಗೆ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಸಚಿವ ಸಂತೋಷ್ ಲಾಡ್, ಸಂಸದ ತುಕಾರಾಂ, ಮಾಜಿ ಸಚಿವ ನಾಗೇಂದ್ರ ಸೇರಿದಂತೆ ಹಲವರು ಇದ್ದರು.