ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಕೈ ಬಿಟ್ಟಿದೆ ಎನ್ನಲಾಗುತ್ತಿದೆ.
ಸದ್ಯದ ಮಾಹಿತಿಯಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ರಿಟೈನ್ ಲಿಸ್ಟ್ ನಲ್ಲಿ ಕೆಎಲ್ ರಾಹುಲ್ ಹೆಸರಿಲ್ಲ. ಹೀಗಾಗಿ ಅವರು ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಕೆ.ಎಲ್. ರಾಹುಲ್ ಅವರನ್ನು ರಿಲೀಸ್ ಮಾಡಲಿದೆ ಎಂಬ ಸುದ್ದಿ ಹರಡಿತ್ತು. ಆದರೆ, ಫ್ರಾಂಚೈಸಿ ಮಾಲೀಕರು ಮಾತ್ರ ರಾಹುಲ್ ನಮ್ಮ ಕುಟುಂಬದ ಸದಸ್ಯರು ಎಂದಿದ್ದರು. ಆದರೆ, ಅವರನ್ನು ರಿಟೈನ್ ಮಾಡಿಕೊಳ್ಳುವ ಕುರಿತು ಮಾತ್ರ ಮಾತನಾಡಿರಲಿಲ್ಲ. ಹೀಗಾಗಿ ಸದ್ಯ ಕೆಎಲ್. ರಾಹುಲ್ ರನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಉಳಿಸಿಕೊಳ್ಳುವುದು ಡೌಟ್ ಎನ್ನಲಾಗುತ್ತಿದೆ.
ಫ್ರಾಂಚೈಸಿಯು ತಮ್ಮ ಮೊದಲ ನಾಯಕನನ್ನು ತಂಡದಿಂದಲೇ ಕೈ ಬಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ ಎಲ್ಎಸ್ಜಿ ಫ್ರಾಂಚೈಸಿ ಜೊತೆಗಿನ ಕೆಎಲ್ ರಾಹುಲ್ ಅವರ 2 ವರ್ಷಗಳ ಒಡನಾಟ ಕೂಡ ಕೊನೆಗೊಳ್ಳಲಿದೆ. 2022 ರಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದರು. ಎಲ್ಎಸ್ಜಿ ಪರ 38 ಪಂದ್ಯಗಳನ್ನಾಡಿರುವ ರಾಹುಲ್ 10 ಅರ್ಧಶತಕ ಹಾಗೂ 2 ಶತಕಗಳೊಂದಿಗೆ ಒಟ್ಟು 1410 ರನ್ ಗಳಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಆದರೂ ತಂಡದ ನಿರ್ಧಾರ ರಾಹುಲ್ ಅಭಿಮಾನಿಗಳಿಗೆ ಬೇಸರ ತರಿಸಿದೆ.