ವ್ಯಾಪಕ ಮಳೆಯಿಂದಾಗಿ ಬೆಂಗಳೂರಿನಲ್ಲಿ ಹಲವಾರು ಅವಘಡಗಳು ಸಂಭವಿಸುತ್ತಿದ್ದು, ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.
ಮಳೆಯಿಂದಾಗಿ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿಯಾಗಿದೆ. ಹೆಣ್ಣೂರು ಸಮೀಪದ ಬಾಬಾ ಸಾಬ್ ಪಾಳ್ಯದಲ್ಲಿ. 60-40 ಸೈಟ್ ಅಳತೆಯಲ್ಲಿ 6 ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಿಸಲಾಗುತ್ತಿತ್ತು. ನಿರ್ಮಾಣ ಹಂತದ ಕಟ್ಟಡದಲ್ಲಿ ಬಿಹಾರ ಮತ್ತು ಉತ್ತರ ಕರ್ನಾಟಕ ಮೂಲದ 21 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ, ಭಾರಿ ಮಳೆ ಹೊಡೆತಕ್ಕೆ, ಕಳಪೆ ಕಾಮಗಾರಿಯಿಂದ ಕೂಡಿದ್ದ ಕಟ್ಟಡ ಏಕಾಏಕಿ ಧರೆಗೆ ಉರುಳಿದೆ. ಪರಿಣಾಮ ಕಾರ್ಮಿಕರು ಸಿಲುಕಿದ್ದರು.
ಈ ಪೈಕಿ ಈಗ ಸಾವಿನ ಸಂಖ್ಯೆ 5ಕ್ಕೆ ಏರಿಕೆ ಕಂಡಿದೆ. ಮೊಹಮ್ಮದ್ ಸಾಹಿಲ್, ತಿರುಪಾಲಿ, ಅರ್ಮಾನ್, ಶಂಕರ್, ಸತ್ಯರಾಜ್ ಸಾವನ್ನಪ್ಪಿರುವ ಕಾರ್ಮಿಕರು ಎನ್ನಲಾಗಿದೆ. ಅಲ್ಲದೇ, ಇನ್ನೂ ಹಲವರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕಾಮಗಾರಿಯ ವೇಳೆಗೆ 21 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಈಗಾಗಲೇ ಅಗ್ನಿಶಾಮಕ, ಎನ್ಡಿಆರ್ಎಫ್, ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ 13 ಕಾರ್ಮಿಕರನ್ನು ರಕ್ಷಿಸಿದ್ದಾರೆ.
6 ಜನ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಲ್ಲೇಶ್ವರಂನಲ್ಲಿ ವಾಸವಿದ್ದ ಆಂಧ್ರ ಮೂಲದ ಮುನಿರಾಜು ರೆಡ್ಡಿ ಎಂಬುವರಿಗೆ ಸೇರಿದ ಕಟ್ಟಡ ಇದಾಗಿದೆ. 6 ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯ 8 ತಿಂಗಳಿಂದ ನಡೆಯುತ್ತಿದೆ. ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಅನುಮತಿ ಪಡೆದು 7 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಮುಂದಾಗಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.