ಮೊದಲ ಬಾರಿಗೆ ತಾಯಿ ಎದೆ ಹಾಲಿನ ಬ್ಯಾಂಕ್ ಸ್ಥಾಪಿಸಲು ವಿಜಯಪುರ ಸಿದ್ಧವಾಗಿದೆ.
ಮಗುವು ಜನಿಸಿದ ತಕ್ಷಣ ಉತ್ಪತ್ತಿಯಾಗುವ ಕೊಲಸ್ಟ್ರಮ್ ಜೀವನ ಪೂರ್ತಿ ಆಂತರಿಕ ರೋಗ ನಿರೋಧಕ ಶಕ್ತಿ ವೃದ್ಧಿಸಲು ಪ್ರತಿಕಾಯ ಒದಗಿಸುತ್ತದೆ. ಅವಧಿಗೂ ಮುನ್ನ ಶಿಶು ಜನಿಸಿರುವುದು, ಎದೆಹಾಲು ಉತ್ಪತ್ತಿಯಾಗದಿರುವುದು, ಮಗು ತಾಯಿಯನ್ನು ಕಳೆದುಕೊಂಡಿರುವ ಸಮಯದಲ್ಲಿ, ಅಥವಾ ತಾಯಿ ಮಗುವಿಗೆ ಎದೆಹಾಲು ಉಣಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಈ ಹಾಲಿನ ಸಹಾಯ ಬೇಕಾಗುತ್ತದೆ. ಹೀಗಾಗಿಯೇ ತಾಯಿಯ ಎದೆ ಹಾಲಿನ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ.
ಅಧ್ಯಯನದ ಪ್ರಕಾರ, ದೇಶದಲ್ಲಿ ಶೇ. 12ರಷ್ಟು ಅವಧಿ ಪೂರ್ವ ಮಕ್ಕಳು ಜನಿಸುತ್ತಿದ್ದಾರೆ. ಹಿಂದುಳಿದ ಜಿಲ್ಲೆಗಳ ತಾಯಿಯ ಎದೆ ಹಾಲಿನ ಕೊರತೆಯಿಂದ, ಅಪೌಷ್ಠಿಕತೆ ಕೊರತೆಯಿಂದ ಮಕ್ಕಳು ಬಳಲುತ್ತಿವೆ. ಹೀಗಾಗಿ ದಾನಿಗಳಿಂದ ಪಡೆದ ತಾಯಿ ಹಾಲನ್ನು ಸೇವಿಸಿದ ಮಕ್ಕಳಲ್ಲಿ ಸೋಂಕು, ಎಂಟೆರೋಕೋಲೈಟಿನ್, ತೀವ್ರವಾದ ಕಾಯಿಲೆಗಳಾಗುವ ಸಂಭವ ಕಡಿಮೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ವಿಜಯಪುರ ಸರ್ಕಾರಿ ಆಸ್ಪತ್ರೆಯು ಉತ್ತರ ಕರ್ನಾಟಕದಲ್ಲಿ ಮೊದಲ ಎದೆಹಾಲು ಬ್ಯಾಂಕ್ ಸ್ಥಾಪಿಸಲು ಮುಂದಾಗಿದೆ. ವಾರ್ಷಿಕವಾಗಿ 2 ಸಾವಿರ ನವಜಾತ ಶಿಶುಗಳಿಗೆ ಸೇವೆ ಸಲ್ಲಿಸಲಿದೆ. ದಾನಿಗಳಿಂದ ತಾಯಿಯ ಹಾಲನ್ನು ಸರಿಯಾದ ರೀತಿಯಲ್ಲಿ ಪಡೆದು ಶೇಖರಿಸಲಾಗುತ್ತದೆ. ಹಾಲನ್ನು ಪಡೆಯುವ ಮುನ್ನ ತಾಯಿಯ ಅನುಮತಿ ಪಡೆದು ಅವಶ್ಯಕವಿರುವ ರಕ್ತ ಪರೀಕ್ಷೆಗಳನ್ನು ಮಾಡಿ ಹಾಲು ಪಡೆಯಲಾಗುತ್ತದೆ.
ಈ ಹಾಲಿನ ಬ್ಯಾಂಕ್ ಗೆ ಸ್ವಯಂ ಪ್ರೇರಿತ ದಾನಿಗಳು, ಮಗುವನ್ನು ಕಳೆದುಕೊಂಡ ತಾಯಂದಿರು, ಕೆಲಸಕ್ಕೆ ಹೋಗುವ ತಾಯಂದಿರು ದಾನ ಮಾಡಬಹುದು. ಸದ್ಯ ಹಲವು ತಾಯಂದಿರು ಹಾಲು ದಾನ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.