ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಗೆ ತೀವ್ರ ಬೆನ್ನುನೋವು ಕಾಣಿಸಿಕೊಂಡಿದೆ. ಈಗ ನಡೆದಾಡಲೂ ಕೂಡ ಪರದಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ವೈದ್ಯರ ಸೂಚನೆಯನ್ನೂ ಪರಿಗಣಿಸದೆ ಜಾಮೀನು ಪಡೆದು ಹೊರ ಬರುವ ಲೆಕ್ಕಾಚಾರದಲ್ಲಿ ನಟ ದರ್ಶನ್ ಇದ್ದಾರೆ ಎನ್ನಲಾಗುತ್ತಿದೆ.
ಜೈಲಿನಲ್ಲಿ ಕುಟುಂಬಸ್ಥರ ಭೇಟಿಗೆಂದು ಜೈಲಿನ ಕೊಠಡಿಯಿಂದ ಹೊರ ಬಂದ ನಟ ದರ್ಶನ್ ಬೆನ್ನು ಹಿಡಿದುಕೊಂಡು, ಕುಟುಂತ್ತಾ ನಿಧಾನವಾಗಿ ಬಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ದರ್ಶನ್ ಕೈಗಳಿಂದ ಬೆನ್ನು ಹಿಡಿದುಕೊಂಡೇ ನಡೆದಿದ್ದಾರೆ. ನೋವಿನಿಂದಾಗಿ ನಟ ದರ್ಶನ್ ಮಂಕಾಗಿದ್ದಾರೆ.
ನಟ ದರ್ಶನ್ ಹಲವು ವರ್ಷಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಆಗಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಗತ್ಯ ವ್ಯಾಯಾಮ, ಥೆರಪಿಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಚಿಕ್ಕ ಪುಟ್ಟ ಶಸ್ತ್ರ ಚಿಕಿತ್ಸೆಗಳು ಆಗಿದ್ದವೂ ಎನ್ನಲಾಗಿದೆ. ಆದರೆ, ಕೊಲೆ ಪ್ರಕರಣದಿಂದ ಜೈಲು ಸೇರಿದ ನಂತರ ಥೆರಪಿಗಳು ಪೂರ್ಮವಾಗಿಲ್ಲ. ಆಹಾರ ಕ್ರಮ, ನಿದ್ದೆಯ ವ್ಯತ್ಯಾಸದಿಂದಾಗಿ ಮತ್ತೆ ಬೆನ್ನು ನೋವು ಹೆಚ್ಚಾಗಿದೆ ಎನ್ನಲಾಗಿದೆ.
ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ದರ್ಶನ್ ಅವರನ್ನು ಎಂಆರ್‌ಐ ಸ್ಕ್ಯಾನಿಂಗ್ ಗೆ ಒಳಪಡುವಂತೆ ಮೆಡಿಕಲ್ ವರದಿ ಸಲ್ಲಿಸಿದ್ದರು. ಆದರೆ, ಇದಕ್ಕೆ ಒಪ್ಪದ ದರ್ಶನ್ ನೋವು ನಿವಾರಕ ಮಾತ್ರೆಗಳನ್ನು ನೀಡುವಂತೆ ಕೇಳಿದ್ದರು. ಬೆಂಗಳೂರಿನಲ್ಲೇ ಬೆನ್ನು ನೋವಿನ ಸರ್ಜರಿ ಮಾಡಿಸಿಕೊಳ್ಳುವುದಾಗಿ ಪಟ್ಟು ಹಿಡಿದಿದ್ದಾರೆ.
ನಟ ದರ್ಶನ್ ಅವರಿಗೆ ತೀವ್ರ ಬೆನ್ನು ನೋವು ಹಿನ್ನೆಲೆ ಹೈಸೆಕ್ಯೂರಿಟಿ ಸೆಲ್‌ನಲ್ಲಿಯೇ ಬಿಮ್ಸ್ ವೈದ್ಯರಿಂದ ಶುಕ್ರವಾರ ಸಂಜೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗಿದೆ. ಬೆಂಗಳೂರಿನ ಸೆಷನ್ಸ್ ಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಜಾ ಆಗಿತ್ತು. ಹೀಗಾಗಿ ಕರ್ನಾಟಕ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಅ. 22ರಂದು ತುರ್ತು ಅರ್ಜಿ ವಿಚಾರಣೆಗೆ ಹೈಕೋರ್ಟ್ ಸೂಚಿಸಿದೆ.