ಬೆಳಗಾವಿ: ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ಉದ್ಯಮಿಯ ಹತ್ಯೆ ನಡೆದಿದ್ದು, ಭಾರೀ ಸಂಚಲನ ಮೂಡಿಸಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದು, ಬೆಚ್ಚಿ ಬೀಳಿಸುವ ಸುದ್ದಿಗಳು ಹೊರ ಬಿದ್ದಿವೆ.
ಪತ್ನಿಯಿಂದ ಉದ್ಯಮಿ ಸಂತೋಷ ಪದ್ಮಣ್ಣನ್ನವರ ಹತ್ಯೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆ ತಪಾಸಣೆ ನಡೆಸುತ್ತಿದ್ದ ವೇಳೆ ಬರೋಬ್ಬರಿ 13 ಹಾರ್ಡ್ ಡಿಸ್ಕ್ಗಳು ಪತ್ತೆಯಾಗಿವೆ. ಹಾರ್ಡ್ ಡಿಸ್ಕ್ ನಲ್ಲಿ ಕೊಲೆಯಾಗಿರುವ ವ್ಯಕ್ತಿ ನೂರಾರು ಹೆಣ್ಣು ಮಕ್ಕಳ ಜೊತೆಗೆ ತಾನು ಕಳೆದ ಖಾಸಗಿ ಕ್ಷಣದ ವಿಡಿಯೋಗಳನ್ನು ಸೆರೆ ಹಿಡಿದಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಉದ್ಯಮಿ ಸಂತೋಷ್ ನೂರಾರು ಮಹಿಳೆಯರೊಂದಿಗೆ ಕಳೆದ ಖಾಸಗಿ ಕ್ಷಣವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ನಂತರ ಅವುಗಳನ್ನು ಹಾರ್ಡ್ ಡಿಸ್ಕ್ನಲ್ಲಿ ಸಂಗ್ರಹಿಸಿ ಇಡುತ್ತಿದ್ದ ಎನ್ನಲಾಗಿದೆ. ಪೊಲೀಸರು 13 ಹಾರ್ಡ್ ಡಿಸ್ಕ್, ಮನೆಯ ಸಿಸಿಟಿವಿ ಡಿವಿಆರ್, ಮೂರು ಪೆನ್ ಡ್ರೈವ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಸಂತೋಷ ಪದ್ಮಣ್ಣನ್ನವರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಅಂತ್ಯ ಸಂಸ್ಕಾರ ಮಾಡಿದ್ದರು. ಆದರೆ, ತಂದೆಯ ಸಾವಿನ ಕುರಿತು ಪುತ್ರಿ ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಪುತ್ರಿ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಾಯಿ ಉಮಾ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಉಮಾ ಅವರನ್ನು ವಿಚಾರಣೆಗೊಳಪಡಿಸಿದ್ದರು. ಆಗ ತಾನು ಮತ್ತು ಫೇಸ್ಬುಕ್ ಗೆಳೆಯರು ಸೇರಿಕೊಂಡು ಕೊಲೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದರು.
ವಿಚಾರಣೆ ಸಂದರ್ಭದಲ್ಲಿ ಪತಿ ಸಂತೋಷ ಪದ್ಮಣ್ಣನ್ನವರ ಕಾಮಕಾಂಡವನ್ನು ಪತ್ನಿ ಪೊಲೀಸರ ಮುಂದೆ ಹೇಳಿದ್ದಾಳೆ. ಅಲ್ಲದೇ, ಹಾರ್ಡ್ ಡಿಸ್ಕ್ನಲ್ಲಿರುವ ಅಶ್ಲೀಲ ವಿಡಿಯೋಗಳ ಬಗ್ಗೆಯೂ ಮಾಹಿತಿ ನೀಡಿದ್ದಳು ಎನ್ನಲಾಗಿದೆ. ಪತಿಯು ಮಕ್ಕಳ ಎದುರು ಬೆತ್ತಲಾಗಿ ಓಡಾಡುತ್ತಿದ್ದರು ಎಂದು ಕೂಡ ಹೇಳಿದ್ದರು. ಈಗ ಸಂತೋಷನ ನಿಜ ರೂಪ ಕಂಡು ಪೊಲೀಸರೂ ದಂಗಾಗಿದ್ದಾರೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.