ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಗಾಗಿ ಎನ್ ಡಿಎ ಕೂಟದಲ್ಲಿ ಹಗ್ಗ-ಜಗ್ಗಾಟ ಶುರುವಾಗಿದೆ. ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ. ನಾನು ಸ್ಪರ್ಧೆ ಮಾಡುತ್ತೇನೆಂದು ಯೋಗೇಶ್ವರ್ ಹೇಳಿದ್ದಾರೆ. ಹೀಗಾಗಿ ಅವರ ಹಠಕ್ಕೆ ಕುಮಾರಸ್ವಾಮಿ ಮಣಿದಿದ್ದಾರೆ ಎನ್ನಲಾಗಿದೆ.
ಬಿಜೆಪಿಯಿಂದ ಸ್ಪರ್ಧೆ ಮಾಡುವ ಬಯಕೆಯನ್ನು ಯೋಗೇಶ್ವರ್ ಮುಂದಿಟ್ಟಿದ್ದರು. ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯ ಕುರಿತು ಮಾತುಗಳು ಕೇಳಿ ಬರುತ್ತಿದ್ದವು. ಹೀಗಾಗಿ ಈ ಕುರಿತು ಹಲವಾರು ಬಾರಿ ಸಭೆಗಳು ನಡೆದಿದ್ದವು. ಈ ಕುರಿತು ಜೆಡಿಎಸ್-ಬಿಜೆಪಿ ಸಮನ್ವಯ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ಈಗ ಜೆಡಿಎಸ್ ಚಿಹ್ನೆಯಡಿ ಯೋಗೇಶ್ವರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.
ಹೀಗಾಗಿ ನಿಖಿಲ್ ಕುಮಾರಸ್ವಾಮಿ ತ್ಯಾಗದ ಮಾತುಗಳನ್ನು ಹೇಳಿದ್ದಾರೆ. ಪ್ರೀತಿ, ವಿಶ್ವಾಸದಿಂದ ಎಲೆಕ್ಷನ್ ನಡೆಯಬೇಕು ಎಂದು ಕುಮಾರಸ್ವಾಮಿ ಹೇಳಿದರೆ, ಯೋಗೇಶ್ವರ್ಗೆ ಅನ್ಯಾಯವಾಗಬಾರದು ಎಂದು ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿಯು ಈಗಾಗಲೇ ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಚನ್ನಪಟ್ಟಣ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಿಪಿವೈ ಸ್ಪರ್ಧೆ ಮಾಡಿದರೆ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಿದಂತಾಗುತ್ತದೆ.
ಒಂದು ವೇಳೆ ಯೋಗೇಶ್ವರ್ ಗೆ ಟಿಕೆಟ್ ನೀಡಿದರೆ, ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ಹೊರ ಹಾಕುತ್ತಾರೆ. ಹೀಗಾಗಿ ಮೈತ್ರಿ ಧರ್ಮ ಪಾಲನೆ ಮಾಡಲು ಜೆಡಿಎಸ್ ಚಿಹ್ನೆಯಿಂದ ಸಿಪಿ ಯೋಗೇಶ್ವರ್ ಸ್ಪರ್ಧೆ ಸಾಧ್ಯತೆ ಇದೆ. ಶನಿವಾರ ನಡೆದಿದ್ದ ಸಮನ್ವಯ ಸಭೆಯಲ್ಲೂ ಸಿಪಿ ಯೋಗೇಶ್ವರ್ ಜೆಡಿಎಸ್ ನಿಂದ ಸ್ಪರ್ಧೆ ಮಾಡುವ ಕುರಿತು ಚರ್ಚೆಯಾಗಿದೆ. ಇದಕ್ಕೆ ಯೋಗೇಶ್ವರ್ ಕೂಡ ಒಪ್ಪಿದ್ದಾರೆ ಎನ್ನಲಾಗಿದೆ.
ಚನ್ನಪಟ್ಟಣ ಟಿಕೆಟ್ ವಿಷಯವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ಚರ್ಚೆ ನಡೆಸಿದ್ದಾರೆ. ಈ ವೇಳೆ ಕುಮಾರಸ್ವಾಮಿ ಅವರಿಗೆ ನಿಮ್ಮ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ನೀವೇ ಚರ್ಚಿಸಿ ತೀರ್ಮಾನ ಕೈಗೊಳ್ಳಿ ಎಂದು ವಿಜಯೇಂದ್ರ ಮತ್ತು ಅಶೋಕ್ ಹೇಳಿದ್ದಾರೆ ಎನ್ನಲಾಗಿದೆ.
ಚನ್ನಪಟ್ಟಣ ಕ್ಷೇತ್ರ ಬಾಕಿ ಇರಿಸಿರುವ ಕಾರಣ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಬಹುತೇಕ ಖಚಿತವಾದಂತಾಗಿದೆ. ಆದರೆ, ಸೈನಿಕನ ಹಠ ಜೆಡಿಎಸ್ ಗೆ ತಲೆನೋವಾಗಿದೆ. ಹೀಗಾಗಿ ಯೋಗೇಶ್ವರ್ ಅವರನ್ನು ಜೆಡಿಎಸ್ ಚಿಹ್ನೆಯಡಿ ಕಣಕ್ಕೆ ಇಳಿಸುವ ಚಿಂತನೆ ನಡೆದಿದೆ. ಈ ಎಲ್ಲ ವಿಷಯಗಳನ್ನು ಗಮನಿಸಿದರೆ ಸೈನಿಕನ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದೆ.