ಹಿರಿಯೂರು : ಕಳ್ಳತನಕ್ಕೆ ಬಂದಿದ್ದ ಖದೀಮರು ವಿದ್ಯುತ್ ಸ್ಪರ್ಶದಿಂದಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರದ ಕಣಜನಹಳ್ಳಿ ರಸ್ತೆಯ ಕೃಷ್ಣಾಪುರ ಜಯರಾಂ ಎಂಬುವವರ ಅಡಿಕೆ ತೋಟದಲ್ಲಿ ನಡೆದಿದೆ. ಮಧ್ಯಪ್ರದೇಶದ ಇಬ್ಬರು ವ್ಯಕ್ತಿಗಳು ಕಳ್ಳತನಕ್ಕೆಂದು ಅಡಿಕೆ ತೋಟಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಮಧ್ಯಪ್ರದೇಶ ಮೂಲದ ಮೋಹಿತ್ (24), ಕತರ್ವವರ್ಷ(38) ವಿದ್ಯುತ್ ಶಾಕ್ ಗೆ ಬಲಿಯಾದವರು. ಸಾವನ್ನಪ್ಪಿದವರು ರಾತ್ರಿ ವೇಳೆ ಅಡಿಕೆ ತೋಟದಲ್ಲಿನ ಶ್ರೀಗಂಧದ ಮರಗಳ ಕಳ್ಳತನಕ್ಕೆ ಹೋಗಿದ್ದಾರೆ. ಅಲ್ಲಿ ಕಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ಮೋಟಾರ್ ಪಂಪ್ ಹತ್ತಿರ ಇದ್ದ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆರೋಪಿಗಳು ಧರ್ಮಪುರದ ಕಣಜನಹಳ್ಳಿ ರಸ್ತೆಯ ಸ್ವಾಭಿಮಾನ ಶಾಲೆ ಬಳಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಕಳ್ಳತನಕ್ಕೆ ಯತ್ನಿಸಿದ್ದಾಗ ಈ ದುರ್ಘಟನೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಸ್ಥಳದಲ್ಲಿ ಕೊಡಲಿ ಹಾಗೂ ಗರಗಸ ಪತ್ತೆಯಾಗಿವೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಪಿಎಸ್ ಐ ಬಾಹುಬಲಿ ಪಡನಾಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.