ಉತ್ತರ ಗಾಜಾ ಪಟ್ಟಿಯಲ್ಲಿನ ಬೀಟ್ ಲಾಹಿಯಾ ಪಟ್ಟಣದ ಮೇಲೆ ಇಸ್ರೇಲ್ ದಾಳಿ ಮುಂದುವರೆಸಿದ್ದು, 73 ಜನರನ್ನು ಬಲಿ ಪಡೆದಿದೆ.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 73 ಜನ ಪ್ಯಾಲೆಸ್ತೇನಿಯನ್ನರು ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ಪಡೆ, ಬಹುಮಹಡಿ ಕಟ್ಟಡ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದರಿಂದಾಗಿ ಸಮೀಪದ ಹಲವು ಮನೆಗಳಿಗೆ ಕೂಡ ಸಾಕಷ್ಟು ಹಾನಿಯಾಗಿವೆ. ಹಮಾಸ್ನ ಲೀಡರ್ ಸಿನ್ವರ್ ಹತ್ಯೆ ಬೆನ್ನಲ್ಲೇ ಯುದ್ಧ ತೀವ್ರ ಸ್ವರೂಪಕ್ಕೆ ತಿರುಗಿದೆ. ಇದೀಗ ಇಸ್ರೇಲ್ ಪ್ರಧಾನಿ ನೆತನ್ಯಾಹು ಮನೆಯ ಮೇಲೆ ಡ್ರೋನ್ ದಾಳಿ ನಡೆಸಿದ್ದಕ್ಕೆ ಕೆಂಡಾಮಂಡಲವಾಗಿದೆ.
ಹೈಫಾ ನಗರದಲ್ಲಿರೋ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಾಸಗಿ ನಿವಾಸದ ಸಮೀಪ ಡ್ರೋನ್ ಸ್ಫೋಟಗೊಂಡಿದೆ. ಈ ದಾಳಿ ನಡೆದಾಗ ನೆತನ್ಯಾಹು ಹಾಗೂ ಅವರ ಪತ್ನಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ನಡೆದಿಲ್ಲ. ಇತ್ತೀಚೆಗಷ್ಟೇ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ನನ್ನ ಹತ್ಯೆಗೈದ ಬೆನ್ನಲ್ಲೇ ಇದಕ್ಕೆ ಪ್ರತಿಯಾಗಿ ಇಸ್ರೇಲ್ ಪ್ರಧಾನಿಯನ್ನೇ ಟಾರ್ಗೆಟ್ ಮಾಡಲಾಗಿದೆ. ಬೆಂಜಮಿನ್ ನೆತನ್ಯಾಹು ನಿವಾಸವನ್ನೇ ಗುರಿಯಾಗಿಸಿ ಮೂರು ಡ್ರೋನ್ ದಾಳಿ ನಡೆದಿದ್ದವು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ದಾಳಿ ಮುಂದುವರೆಸಿದೆ.