ಚಂದನವನದ ನಿರ್ಮಾಪಕ ಕೆ ಮಂಜು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೆ. ಮಂಜು ಅವರು ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆ ಮಂಜು ಆರೋಗ್ಯದಲ್ಲಿ ಏರುಪಾರಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗ ವೈರಲ್ ಆಗುತ್ತಿರುವ ಚಿತ್ರದಲ್ಲಿ ಕೆ ಮಂಜು ಅವರ ಎದೆ, ಕೈ, ಕಾಲುಗಳಿಗೆ ಇಸಿಜಿ ವೈಯರ್ ಕೇಬಲ್ ಜೋಡಿಸಲಾಗಿದೆ. ಕೆ ಮಂಜು ಅವರು ಹೃದಯ ಸಂಬಂಧಿ ಪರೀಕ್ಷೆಗೆ ಒಳಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಸ್ವತಃ ಸ್ಪಷ್ಟನೆ ನೀಡಿರುವ ಕೆ ಮಂಜು, ಯಾವುದೇ ಅನಾರೋಗ್ಯ ಇಲ್ಲ. ಇತ್ತೀಚೆಗೆ ಕೆಲಸ ತುಸು ಹೆಚ್ಚಾಗಿ ಒತ್ತಡ ಉಂಟಾಗಿತ್ತು. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಜನರಲ್ ಬಾಡಿ ಚೆಕಪ್ ಮಾಡಿಸಿದೆ ಎಂದು ಹೇಳಿದ್ದಾರೆ.
ಕೆ ಮಂಜು ಅವರಿಗೆ ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಬಳಲಿದ್ದರು. ಶಸ್ತ್ರಚಿಕಿತ್ಸೆಯೂ ಆಗಿತ್ತು. ಹೀಗಾಗಿ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ತಮ್ಮ ಆಪ್ತ ವೈದ್ಯರ ಸಲಹೆಯಂತೆ ಅವರದ್ದೇ ಕ್ಲೀನಿಕ್ ನಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ.
ಕೆ ಮಂಜು ಅವರು ‘ಯಮಲೋಕದಲ್ಲಿ ವೀರಪ್ಪನ್’, ಸುದೀಪ್ ನಟನೆಯ ‘ವಾಲಿ’, ವಿಷ್ಣುವರ್ಧನ್ ನಟನೆಯ ‘ಜಮೀನ್ದಾರ್ರು’, ‘ಹೃದಯವಂತ’ ಸೇರಿದಂತೆ ಹಲವಾರು ಚಿತ್ರಗಳನ್ನು ನೀಡಿದ್ದಾರೆ.