ಬೆಳಗಾವಿ: ಈ ಬಾರಿಯ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದ್ದು, ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲಾಗುವುದು ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಉತ್ತಮವಾಗಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚಿಸಲು ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಹೇಳಿದ್ದಾರೆ.
ಈ ಭಾಗದ ಜನರಿಗೂ ನಮ್ಮ ವಿಧಾನಸೌಧ ಅನ್ನೋ ಭಾವನೆ ಮೂಡಬೇಕು. ಹೀಗಾಗಿ ಸುವರ್ಣ ವಿಧಾನಸೌಧಕ್ಕೆ ಎಲ್ಲರೂ ಬರಬೇಕು. ಹೀಗಾಗಿ ಸುಲಭದಲ್ಲಿ ಪಾಸ್ ಸಿಗುವ ವ್ಯವಸ್ಥೆ ಮಾಡಬೇಕು. ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನೂ ಕರೆದುಕೊಂಡು ಬರವ ವ್ಯವಸ್ಥೆ ಕೂಡ ಇದೆ ಎಂದಿದ್ದಾರೆ.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ನೂರನೇ ವರ್ಷದ ಸಂಭ್ರಮ ಮತ್ತು ಕಿತ್ತೂರು ಚೆನ್ನಮ್ಮ 200 ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಮಾಡುತ್ತೇವೆ. ಸುವರ್ಣ ಸೌಧದಲ್ಲಿ ಗಾಂಧಿ ಪ್ರತಿಮೆ ಈ ವರ್ಷ ಸ್ಥಾಪನೆ ಆಗಲಿದೆ. ಈ ವೇಳೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇದ್ದರು.