ಜೈಪುರ: ಜೈಪುರದ ದೇಗುಲವೊಂದರಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ದುಷ್ಕರ್ಮಿಗಳು ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಏಕಾಏಕಿಯಾಗಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸುಮಾರು 10 ಜನ ಆರೆಸ್ಸೆಸ್ ಕಾರ್ಯಕರ್ತರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶರದ್ ಹುಣ್ಣಿಮೆ ನಿಮಿತ್ತ ದೇಗುಲದಲ್ಲಿ ಜಾಗರಣ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ ದೇಗುಲಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ಹಂಚಿಕೆ ಮಾಡಲು ಸಿದ್ದತೆ ನಡೆಯುತ್ತಿತ್ತು. ಆಗ ಇಬ್ಬರು ದುಷ್ಕರ್ಮಿಗಳು ನಡು ರಾತ್ರಿ ವೇಳೆ ಚಾಕು ಸಮೇತ ಕಾರ್ಯಕ್ರಮ ನಡೆಯುತ್ತಿದ್ದ ಮಂದಿರಕ್ಕೆ ಆಗಮಿಸಿ ಎಲ್ಲರ ಮೇಲೂ ಹಲ್ಲೆ ನಡೆಸಲು ಮುಂದಾದರು. ನಂತರ ಕಂಡ ಕಂಡವರ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಆನಂತರ ಮತ್ತಷ್ಟು ದುಷ್ಕರ್ಮಿಗಳು ಇವರೊಂದಿಗೆ ಸೇರಿದ್ದಾರೆ.
ದುಷ್ಕರ್ಮಿಗಳು ಭಕ್ತಾದಿಗಳು ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ದಾಳಿ ನಂತರ ಭಕ್ತರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ 6 ಜನ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.