ಬಳ್ಳಾರಿ: ಸಂಸದ ಇ. ತುಕಾರಾಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿ ಪಾಳಯದಲ್ಲಿ ಶ್ರೀರಾಮುಲು ಅವರ ಹೆಸರು ಕೇಳಿ ಬರುತ್ತಿದ್ದು, ಅವರ ಹೇಳಿಕೆ ಕೂಡ ಕುತೂಹಲ ಕೆರಳಿಸಿದೆ.
ಸಂಡೂರಿನಿಂದ ಶ್ರೀರಾಮುಲು ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಹಲವು ದಿನಗಳಿಂದಲೂ ಕೇಳಿ ಬರುತ್ತಿದ್ದವು. ಆದರೆ, ಈ ಕುರಿತು ಸ್ವತಃ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ. ನಾನು ಆಕಾಂಕ್ಷಿಯೂ ಅಲ್ಲ, ಅಭ್ಯರ್ಥಿಯೂ ಅಲ್ಲ. ಪಕ್ಷದ ಸಂಘಟನೆಯಷ್ಟೇ ನನ್ನ ಮುಂದಿನ ಗುರಿಯಾಗಿರಲಿದೆ. ನಾನು ಸ್ಪರ್ಧೆ ಮಾಡುವ ಕುರಿತು ಎಲ್ಲಿಯೂ ಚರ್ಚೆಯಾಗಿಲ್ಲ. ನಾನು ಕೂಡ ಚಿಂತನೆ ಮಾಡಿಲ್ಲ ಎಂದಿದ್ದಾರೆ.
ಆದರೆ, ಈ ಬಾರಿ ಸಂಡೂರಿನಿಂದ ಕಾಂಗ್ರೆಸ್ ಗೆ ಮತದಾರರು ಗೇಟ್ ಪಾಸ್ ನೀಡಲಿದ್ದಾರೆ. ಇನ್ನು ಮುಂದೆ ಕೇವಲ ಸಂಡೂರು ಅಲ್ಲ, ಬಳ್ಳಾರಿಯಿಂದಲೂ ಕಾಂಗ್ರೆಸ್ ಗೆ ಗೇಟ್ ಪಾಸ್ ನೀಡುತ್ತೇವೆ ಎಂದಿದ್ದಾರೆ.
ಬಿಜೆಪಿಯಲ್ಲಿ 15 ಸ್ಥಳೀಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಸಂಸದ ವೈ.ದೇವೇಂದ್ರಪ್ಪ, ಹಿಂದೆ ಕೆಆರ್ ಪಿಪಿಯಿಂದ ಸ್ಪರ್ಧಿಸಿದ್ದ ಕೆ.ಎಸ್. ದಿವಾಕರ, ಡಿ. ಪ್ರಹ್ಲಾದ ಸೇರಿದಂತೆ ಹಲವರು ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ, ಇನ್ನೂ ಹಲವರು ಟಿಕೆಟ್ ರೇಸ್ ನಲ್ಲಿದ್ದಾರೆ.
ಕಾಂಗ್ರೆಸ್ ನಲ್ಲಿ ಸಚಿವ ಸಂತೋಷ್ ಲಾಡ್, ಬಿಜೆಪಿ ಹಿರಿಯ ಮುಖಂಡ ಕಾರ್ತಿಕೇಯ ಘೋರ್ಪಡೆ ಅವರ ಆಣತಿಯಂತೆ ಎಲ್ಲವೂ ನಡೆಯಲಿದ್ದು, ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.