ಬೆಂಗಳೂರು: ಎಚ್ ಎಂಟಿ ಹಾಗೂ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ (KIOCL) ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ಈ ಬಗ್ಗೆ ನಾನು ದಾಖಲೆಗಳ ಸಮೇತ ರಾಜ್ಯ ಸರಕಾರದ ಜತೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ಕೆಐಒಸಿಎಲ್ ಬಗ್ಗೆ ರಾಜ್ಯ ಸರ್ಕಾರ ಸುಮ್ಮನೆ ರಾಜಕಾರಣ ಮಾಡಬಾರದು. ಸಮಸ್ಯೆ ಇದ್ದರೆ ಕೂತು ಸರಿಪಡಿಸಿಕೊಳ್ಳಬೇಕು. ರಾಜ್ಯದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳನ್ನು ಉಳಿಸುವ ಕುರಿತು ನಾನು ಕೆಲಸ ಮಾಡುತ್ತಿದ್ದೇನೆ. ಈ ಕುರಿತು ನಾನು ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರಿಗೆ ಪತ್ರ ಬರೆಯುತ್ತೇನೆ. ರಾಜ್ಯದ ಹಿತಾಸಕ್ತಿಯ ಬಗ್ಗೆ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಹಠಮಾರಿತನದಿಂದ ಕುದುರೆಮುಖ ಸಂಸ್ಥೆಯ ಸುಮಾರು 300-400 ಕಾರ್ಮಿಕರು ಬೀದಿಯಲ್ಲಿ ನಿಂತಿದ್ದಾರೆ. ಒಂದು ಕಡೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವ ರಾಜ್ಯ ಸರಕಾರ ಮತ್ತೊಂದೆಡೆ ಅಸಹಕಾರ ನೀಡುತ್ತಿದೆ. ಪ್ರತಿಯೊಂದಕ್ಕೂ ಕೇಂದ್ರ ಸರಕಾರವನ್ನು ನಿಂದಿಸಿದರೆ ಉಪಯೋಗವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.