ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಅಲ್ಲಿನ ಕೋರ್ಟ್ ಬಂಧನ ವಾರೆಂಟ್ ಹೊರಡಿಸಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಇತ್ತೀಚೆಗಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಬಾಂಗ್ಲಾದೇಶ ತೊರೆದು ಭಾರತಕ್ಕೆ ಬಂದಿದ್ದರು. ಅವರು ಇಲ್ಲಿಂದ ಲಂಡನ್ ಗೆ ತೆರಳುವ ಯೋಜನೆ ಹಾಕಿಕೊಂಡಿದ್ದರು. ಆದರೆ ಬ್ರಿಟಿಷ್ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗದ ಹಿನ್ನೆಲೆಯಲ್ಲಿ ಅವರು ಭಾರತದಲ್ಲೇ ನೆಲೆಸಿದ್ದಾರೆ.
ಆದರೆ, ಈ ಮಧ್ಯೆ ಬಾಂಗ್ಲಾದೇಶ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಬಾಂಗ್ಲಾದೇಶ ನ್ಯಾಯಾಲಯವು ಶೇಖ್ ಹಸೀನಾ ವಿರುದ್ಧ ಇಂದು ಅಕ್ಟೋಬರ್ 17 ಗುರುವಾರ ಬಂಧನ ವಾರಂಟ್ ಹೊರಡಿಸಿದೆ. ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್‌ನ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಾಜುಲ್ ಇಸ್ಲಾಂ ಈ ಬಂಧನ ವಾರಂಟ್ ಕುರಿತು ತಿಳಿಸಿದ್ದಾರೆ.
ಬಾಂಗ್ಲಾದೇಶ ಹಿಂಸಾಚಾರಕ್ಕೆ ಹೆದರಿ ದೇಶಬಿಟ್ಟು ಓಡಿ ಬಂದಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನ ಮತ್ತೆ ಮರಳಿ ದೇಶಕ್ಕೆ ಕರೆಸಿಕೊಳ್ಳಬೇಕು ಎಂದು ಅಲ್ಲಿನ ರಾಜಕಾರಣಿಗಳು ಪಣತೊಟ್ಟಿದ್ದಾರೆ ಎಂದು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯ ಮಂಡಳಿಯಲ್ಲಿ ಬಾಂಗ್ಲಾ ಪರ ವಕಾಲತ್ತು ವಹಿಸುವ ವಕೀಲ ಮೊಹಮ್ಮದ್ ತಾಜುಲ್ ಇಸ್ಲಾಂ ಇದೀಗ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶೇಖ್ ಹಸೀನಾ ಅವರನ್ನು ಭಾರತದಿಂದ ವಾಪಸ್ ಕರೆಯಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಸೀನಾ ಜೊತೆ ಬಾಂಗ್ಲಾದೇಶ ಬಿಟ್ಟು ಓಡಿ ಹೋದ ಎಲ್ಲರನ್ನೂ ಕರೆಸಿಕೊಳ್ಳುತ್ತೇವೆ ಎಂದಿದ್ದಾರೆ. ಶೇಖ್ ಹಸೀನಾ ಅವರು ನವೆಂಬರ್ 18ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಕೋರ್ಟ್ ಸೂಚಿಸಿದೆ.