ಭೂಮಂಡಲದಲ್ಲಿ ಯುದ್ಧದಿಂದಾಗಿ ಈಗಾಗಲೇ ಜನರು ಕಂಗೆಟ್ಟಿದ್ದಾರೆ. ಈ ಮಧ್ಯೆ ಯುದ್ಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಭಯಭೀತರಾಗುತ್ತಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ ನ ನಾಗರಿಕರು, ಇಸ್ರೇಲ್ ಹಾಗೂ ಮಧ್ಯಪ್ರಾಚ್ಯದ ರಾಷ್ಟ್ರಗಳ ಜನರು ಈಗಾಗಲೇ ಯುದ್ಧದಲ್ಲಿ ಸಿಲುಕಿ, ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಳೆದೊಂದು ವಾರದಿಂದ ದಕ್ಷಿಣ ಕೊರಿಯಾದ ಮೇಲೆ ಗುಡುಗುತ್ತಿದ್ದು, ಯುದ್ಧದ ಭೀತಿ ಆವರಿಸಿದೆ.
ಇನ್ನೊಂದೆಡೆ ದಕ್ಷಿಣ ಕೊರಿಯಾ ಹಾರಿಸಿದ ಕರಪತ್ರವುಳ್ಳ ಡ್ರೋನ್ ಗಳು ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್ಯಾಂಗ್ ನಲ್ಲಿ ಪತ್ತೆಯಾಗಿವೆ. ಇವು ಕಿಮ್ ಜಾಂಗ್ ಉನ್ ಆಡಳಿತವನ್ನು ಟೀಕಿಸುವ ಕರಪತ್ರಗಳು ಎನ್ನುವುದು ಉತ್ತರ ಕೊರಿಯಾದ ಆರೋಪ. ಹೀಗಾಗಿ ಇದರಿಂದ ಆಕ್ರೋಶಗೊಂಡಿರುವ ಕಿಮ್ ಜಾಂಗ್ ಉನ್ ಸೋದರಿ ಕಿಮ್ ಯೋ ಜಾಂಗ್, ದಕ್ಷಿಣ ಕೊರಿಯಾವನ್ನು ನಾಶಪಡಿಸುವ ಬೆದರಿಕೆ ಒಡ್ಡಿದ್ದಾರೆ. ”ನಾವು ದಾಳಿ ಮಾಡಿದರೆ, ದಕ್ಷಿಣ ಕೊರಿಯಾ ಬೂದಿಗುಡ್ಡೆಯಾಗುತ್ತದೆ ಎಂದು ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ.
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವೆ ಇದ್ದ ಬೆಸುಗೆಯಂತಿದ್ದ ಏಕೈಕ ರೈಲ್ವೆ ಮಾರ್ಗ, ಮುಖ್ಯ ದಾರಿಯನ್ನೂ ಕಿಮ್ ಜಾಂಗ್ ಉನ್ ಸೇನೆ ಸ್ಫೋಟಿಸಿದೆ. ತನ್ನ ಸೇನಾ ಬಲವನ್ನು ಹೆಚ್ಚಿಸಲು ಉತ್ತರ ಕೊರಿಯಾ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ದಕ್ಷಿಣ ಕೊರಿಯಾ, ”ನಾವು ಯಾವುದೇ ಡ್ರೋನ್ ಗಳನ್ನು ಹಾರಿಬಿಟ್ಟಿಲ್ಲ. ಉತ್ತರ ಕೊರಿಯಾದಿಂದ ಇಂಥ ಆರೋಪವನ್ನು ನಾವು ಕೇಳುತ್ತಿರುವುದು ಇದೇ ಮೊದಲು. ನಮ್ಮ ತಂಟೆಗೆ ಬಂದರೆ ನಾವು ತಕ್ಕ ಉತ್ತರ ಕೊಡುತ್ತೇವೆ ಎಂದಿದೆ. ಹೀಗಾಗಿ ಯುದ್ಧದ ಕಾರ್ಮೋಡ ಆವರಿಸಿದೆ.
ಪರಸ್ಪರ ಶತ್ರುಗಳಾಗಿರುವ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ದ್ವೇಷ ಸುಮಾರು 70 ವರ್ಷಗಳಿಗಿಂತ ಹಳೆಯದಾಗಿದೆ. ಉತ್ತರ ಮತ್ತು ದಕ್ಷಿಣ ಕೊರಿಯಾ ಒಂದೇ ಆಗಿದ್ದಾಗ ಅದನ್ನು ‘ಕೊರಿಯನ್ ಪೆನಿನ್ಸುಲಾ’ ಎಂದು ಕರೆಯಲಾಗಿತ್ತು. 1948ರ ಆಗಸ್ಟ್ 15ರಂದು ಎರಡೂ ಕೊರಿಯಾಗಳಲ್ಲಿ ಪ್ರತ್ಯೇಕ ಸರಕಾರಗಳು ರಚನೆಗೊಂಡವು. ಉತ್ತರ ಕೊರಿಯಾದಲ್ಲಿ ಕಮ್ಯುನಿಸ್ಟ್ ಆಡಳಿತದ ‘ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ’ ಮತ್ತು ದಕ್ಷಿಣದಲ್ಲಿ ಪ್ರಜಾಪ್ರಭುತ್ವದ ತಳಹದಿ ಮೇಲೆ ರಚಿತವಾದ ‘ರಿಪಬ್ಲಿಕ್ ಆಫ್ ಕೊರಿಯಾ’ ಉದಯವಾಯಿತು. ಉತ್ತರ ಕೊರಿಯಾ ಹಿಂದೆ ರಷ್ಯಾ ಬೆಂಗಾವಲಾಗಿದ್ದರೆ, ದಕ್ಷಿಣ ಕೊರಿಯಾದ ಹಿಂದೆ ಅಮೆರಿಕ ನಿಂತಿತ್ತು. ಬೇರೆ ಬೇರೆಯಾದ ನಂತರ ಎರಡೂ ರಾಷ್ಟ್ರಗಳ ಮಧ್ಯೆ ವೈರತ್ವ ಆರಂಭವಾಯಿತು.