ಬೈಂದೂರು: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ಮೇಕೋಡು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ನಡೆಯಿತು.

ದೇವಿಗೆ ವಿಶೇಷ ಅಲಂಕಾರ ಪೂಜೆ, ಮಹಾ ಮಂಗಳಾರತಿ, ಹಣ್ಣು ಕಾಯಿ ಸೇವೆ, ಚಂಡಿಕಾ ಹೋಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಸೇವೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಅ. 3ರಿಂದ ಆರಂಭಗೊಂಡಿರುವ ನವರಾತ್ರಿ ಉತ್ಸವವು ಅ. 12ರ ವರೆಗೆ ನಡೆಯಲಿದೆ. ಹೀಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿಶೇಷ ಪೂಜೆಯಲ್ಲಿ ಭಾಗವಹಿಸುವುದರ ಮೂಲಕ ಪ್ರಸಾದ ಸ್ವೀಕರಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಕೋರಿದೆ.
ವೇದಮೂರ್ತಿ ಉಳ್ಳೂರು ವಾಸುದೇವ್ ಐತಾಳ್, ಅರ್ಚಕ ಪದ್ಮನಾಭ ಅಡಿಗ ಅವರು ಪ್ರತಿದಿನ ವಿಶೇಷ ಪೂಜೆ ಕೈಗೊಳ್ಳುತ್ತಿದ್ದಾರೆ. ದೇವಸ್ಥಾನದ ಆಡಳಿತ ಧರ್ಮದರ್ಶಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಈ ವಿಷಯವಾಗಿ ಮಾತನಾಡಿ, ನವರಾತ್ರಿ ಉತ್ಸವದ ಅಂಗವಾಗಿ ದಶಮಿ ತನಕ ಜನರು ಹಾಗೂ ಲೋಕಕ್ಕೆ ಒಳ್ಳೆಯದಾಗಲಿ ಎಂಬ ಉದ್ಧೇಶದಿಂದ ಚಂಡಿಕಾ ಹೋಮ, ದುರ್ಗಾ ಪಾರಾಯಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.