ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಅವರು ಕೊನೆಗೂ ರಾಜಕೀಯ ಕುಸ್ತಿಯಲ್ಲಿ ಗೆದ್ದು ಬೀಗಿದ್ದಾರೆ.
ಬಿಜೆಪಿ ನಾಯಕ ಯೋಗೇಶ್ ಕುಮಾರ್ ಅವರನ್ನು 6,015 ಮತಗಳ ಅಂತರದಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲು ಸಜ್ಜಾಗಿ ನಿಂತಿದ್ದಾರೆ. ಮಾಜಿ ಕುಸ್ತಿ ಪಟು ವಿನೇಶ್ ಫೋಗಟ್ ಇತ್ತೀಚೆಗೆ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅನರ್ಹಗೊಂಡಿದ್ದರು. ಆದರೆ, ಆನಂತರ ಅವರು ಕುಸ್ತಿಗೆ ವಿದಾಯ ಹೇಳಿ, ರಾಜಕೀಯ ರಂಗ ಪ್ರವೇಶಿಸಿದ್ದರು. ಈಗ ರಾಜಕೀಯದಲ್ಲಿ ಯಶಸ್ವಿಯಾಗಿದ್ದಾರೆ.
ಫ್ರಾನ್ಸ್ ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ 50 ಕೆ.ಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಫೋಗಟ್ ಎಲ್ಲರನ್ನು ಮಕಾಡೆ ಮಲಗಿಸಿ ಫೈನಲ್ ಪ್ರವೇಶಿಸಿದ್ದರು. ಆದರೆ, ದುರಾದೃಷ್ಟ ಎನ್ನುವಂತೆ ಅಂತಿಮ ಹಣಾಹಣಿಗೂ ಮುನ್ನ ನಡೆದ ದೇಹ ತೂಕದ ಪರೀಕ್ಷೆಯಲ್ಲಿ ಅನುಮತಿಸಲಾದ ತೂಕಕ್ಕಿಂತ 100 ಗ್ರಾಂ ಹೆಚ್ಚಿರುವುದು ಕಂಡು ಬಂದಿತ್ತು. ಹೀಗಾಗಿ ಅವರನ್ನು ಅನರ್ಹಗೊಳಿಸಲಾಗಿತ್ತು.
ಈ ಅನರ್ಹತೆಯ ಬೆನ್ನಲ್ಲೇ ಬೆಳ್ಳಿ ಪದಕಕ್ಕಾಗಿ ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹಲವಾರು ದಿನಗಳ ಕಾಯುವಿಕೆಯ ನಂತರ ಅಂತಿಮವಾಗಿ ಅವರ ಮನವಿಯನ್ನು ಸಿಎಎಸ್ ತಿರಸ್ಕಾರ ಮಾಡಿತ್ತು. ಈ ಮೂಲಕ ಒಲಿಂಪಿಕ್ಸ್ ಅಖಾಡದಲ್ಲಿ ಪದಕ ಗೆಲ್ಲುವ ಅವರ ಬಹುಕಾಲದ ಕನಸು ಮಣ್ಣುಪಾಲಾಗಿತ್ತು. ಆನಂತರ ಅವರು ಕುಸ್ತಿಗೆ ವಿದಾಯ ಹೇಳಿ, ಕಾಂಗ್ರೆಸ್ ಪಕ್ಷ ಸೇರಿದ್ದರು. ಹರಿಯಾಣಾದ ಜೂಲಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನೇಶ್ ಫೋಗಟ್, ಬಿಜೆಪಿ ಪ್ರತಿಸ್ಪರ್ಧಿ ಯೋಗೇಶ್ ಕುಮಾರ್ ಅವರನ್ನು 6,015 ಮತಗಳ ಅಂತರದಿಂದ ಸೋಲಿಸಿದ್ದಾರೆ.