ಹರಿಯಾಣದಲ್ಲಿ ಮತ್ತೊಮ್ಮೆ ಆಡಳಿತ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಿರುವುದು ಸ್ಪಷ್ಟವಾಗಿದೆ. ಈ ಮೂಲಕ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಮತಗಟ್ಟೆ ಸಮೀಕ್ಷೆಗಳನ್ನು ಸುಳ್ಳು ಮಾಡಿದೆ. ಹರಿಯಾಣದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ಸಾಧಿಸಿ ಹ್ಯಾಟ್ರಿಕ್ ಜಯ ಸಂಪಾದಿಸುವತ್ತ ಸಾಗುತ್ತಿದೆ. ಸದ್ಯದ ಮಾಹಿತಿಯಂತೆ ಬಿಜೆಪಿ ಬಹುತೇಕ ಸರಳ ಬಹುಮತದತ್ತ ಮುನ್ನುಗ್ಗುತ್ತಿದೆ.
ಹರಿಯಾಣದ 90 ಕ್ಷೇತ್ರಗಳಿಗೆ ಅಕ್ಟೋಬರ್ ಐದರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಆಡಳಿತ ವಿರೋಧಿ ಅಲೆ ( Anti-incumbency ) ಬಿಜೆಪಿಗೆ ಮುಳುವಾಗಲಿದೆ ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಕಾಂಗ್ರೆಸ್ – ಸಿಪಿಐ (ಎಂ) ಜೊತೆ ಸೇರಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು.
ಹರಿಯಾಣದಲ್ಲಿ ಬಲಿಷ್ಠವಾಗಿದ್ದ ಭಾರತೀಯ ಲೋಕದಳ, ಕಾಂಗ್ರೆಸ್ – ಬಿಜೆಪಿ ನಡುವೆ ಪೈಪೋಟಿಯಲ್ಲಿ ಹಿಂದಕ್ಕೆ ಬಿದ್ದಿದೆ. ಬಿಜೆಪಿಯ ನಾಯಕರು ಪ್ರಚಾರಕ್ಕೆ ಬಳಸಿದಂತಹ ಅಸ್ತ್ರ. ಪ್ರಮುಖವಾಗಿ, ಇಲ್ಲಿ ಪ್ರಧಾನಿ ಮೋದಿಯಾಗಿ ಎಲ್ಲ ಬಿಜೆಪಿ ನಾಯಕರು, ಕರ್ನಾಟಕದ ವಿದ್ಯಮಾನವನ್ನು ಬಳಸಿಕೊಂಡಿದ್ದರು.
ಚುನಾವಣೆಯ ವೇಳೆಯೇ ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣ ಮುನ್ನಲೆಗೆ ಬಂದಿದ್ದರಿಂದ, ಇದನ್ನೇ ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡಿತ್ತು. ಮುಖ್ಯಮಂತ್ರಿಗಳ ಹೆಸರನ್ನೇ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಬಳಸಿಕೊಂಡಿದ್ದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿಯವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಎಫ್ ಐಆರ್ ದಾಖಲಾಗಿರುವುದನ್ನು ಮೋದಿ ತಮ್ಮ ಪ್ರಚಾರದಲ್ಲಿ ಬಳಸಿಕೊಂಡಿದ್ದರು. ಇಂತಹ ಹಗರಣ ನಡೆದರು ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಿಲ್ಲ ಎಂದಿದ್ದರು. ಅಲ್ಲದೇ, ರಾಜ್ಯದಲ್ಲಿ ನಡೆದ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ, ಭ್ರಷ್ಟಾಚಾರ ನಡೆದದ್ದು 187 ಕೋಟಿ ಅಲ್ಲ, 82 ಕೋಟಿ ಎನ್ನುವುದನ್ನು ಖುದ್ದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲೇ ಒಪ್ಪಿಕೊಂಡಿದ್ದರು ಎಂದು ಮೋದಿ, ತಮ್ಮ ಚುನಾವಣಾ ಪ್ರಚಾರದಲ್ಲಿ ಉಲ್ಲೇಖಿಸಿದ್ದರು.
ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ದಿ ಕೆಲಸಗಳು ಆಗದೇ ಇರುವುದು. ಅನುದಾನ ಬಿಡುಗಡೆ ಆಗದೇ ಇರುವುದನ್ನು ಕಾಂಗ್ರೆಸ್ ಶಾಸಕರೇ ಬಹಿರಂಗ ಪಡಿಸುತ್ತಿದ್ದಾರೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಇವುಗಳ ಮಧ್ಯೆ ಬಿಜೆಪಿ ಹರಿಯಾಣದಲ್ಲಿ ಮತ್ತೊಮ್ಮೆ ತನ್ನ ಪಾರುಪತ್ಯ ಉಳಿಸಿಕೊಂಡಿದೆ.