ಗದಗ: ತನ್ನ ತಂಗಿಯನ್ನು ಪ್ರೀತಿ (Love) ಸಿದ್ದಾನೆ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಅಣ್ಣ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ (Attempted Murder) ಘಟನೆ ಗದಗ ನಗರದ ಧೋಬಿ ಘಾಟ್ ಹತ್ತಿರ ಅ. 6ರಂದು ನಡೆದಿದೆ. ಧಾರವಾಡ ಮೂಲದ ಜಾಫರ್ ಜಮಾದಾರ ಎಂಬ 25 ವರ್ಷದ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಚಾಕುವಿನಿಂದ ಇರಿಯಲಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಜಾಫರ್ ನನ್ನು ಕೂಡಲೇ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಯುವಕ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡ ಜಾಫರ್ ನನ್ನು ರಾತ್ರೋರಾತ್ರಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಜಾಫರ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರುಹಾನ್ ಎಂಬ ಯುವಕನ ತಂಗಿಯನ್ನು ಜಾಫರ್ ಪ್ರೀತಿಸಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕರೆಸಿ ಬುದ್ಧಿ ಹೇಳಲಾಗಿತ್ತು. ವಾರ್ನಿಂಗ್ ಕೊಟ್ಟಿದ್ದರೂ ಜಾಫರ್ ಮಾತ್ರ ಆತನ ತಂಗಿಯೊಂದಿಗೆ ಸಲುಗೆಯಿಂದಲೇ ಇದ್ದ. ಹೀಗಾಗಿ ಆಕ್ರೋಶದಲ್ಲಿ ರುಹಾನ್ ಚಾಕುವಿನಿಂದ ಇರಿದಿದ್ದಾನೆ.
ಅ. 6 ರಂದು ರಾತ್ರಿ ಟೀ ಸ್ಟಾಲ್ ಹತ್ತಿರ ನಿಂತಿದ್ದ ಸಂದರ್ಭದಲ್ಲಿ ಕೂಡ ರುಹಾನ್ ಜೊತೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ರುಹಾನ್ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾನೆ. ಆರೋಪಿ ರುಹಾನ್ ಹಾಗೂ ದಾದಾಪೀರ್ ಸೇರಿ ಕೊಲೆಗೆ ಯತ್ನಿಸಿದ್ದಾರೆ. ಆರೋಪಿ ರುಹಾನ್ ಪರಾರಿಯಾಗಿದ್ದು, ಮತ್ತೋರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.