ಬೆಂಗಳೂರು: ತಿರುಪತಿ ಪ್ರಸಾದದಲ್ಲಿ ಕೊಬ್ಬಿನಾಂಶ ಪತ್ತೆಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದ ನಂದಿನಿ ಬ್ರ್ಯಾಂಡ್ ತುಪ್ಪಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ಟಿಟಿಡಿ ಮಂಡಳಿ ಹೆಚ್ಚುವರಿ ತುಪ್ಪ ಪೂರೈಸುವಂತೆ ಕೆಎಂಎಫ್ ಗೆ ಸೂಚಿಸಿದೆ.
ತಿರುಪತಿ ಲಡ್ಡು ತಯಾರಿಕೆಗೆ ಸುಮಾರು 20 ವರ್ಷಗಳಿಂದ ನಂದಿನಿ ತುಪ್ಪ ಬಳಸಲಾಗುತ್ತಿತ್ತು. ಆದರೆ, 2022 – 23ರಿಂದ ನಂದಿನಿ ತುಪ್ಪದ ದರ ಹೆಚ್ಚಳವಾಗಿದ್ದರಿಂದಾಗಿ ತುಪ್ಪದ ಪೂರೈಕೆ ಸ್ಥಗಿತವಾಗಿತ್ತು. ಆದರೆ, ಇತ್ತೀಚೆಗೆ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಿರುವ ಆರೋಪ ಕೇಳಿ ಬರುತ್ತಿದ್ದಂತೆ, ಟಿಟಿಡಿ ಆಡಳಿತ ಮಂಡಳಿಯು ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಪೂರೈಸುವಂತೆ ಕೆಎಂಎಫ್ ಗೆ ಮನವಿ ಮಾಡಿದೆ. 2024-25ನೇ ಸಾಲಿನಲ್ಲಿ 350 ಟನ್ ನಂದಿನಿ ತುಪ್ಪ ಸರಬರಾಜು ಮಾಡುವಂತೆ ಟಿಟಿಡಿ ಟೆಂಡರ್ ಮೂಲಕ ಬೇಡಿಕೆ ಇಟ್ಟಿದೆ. ಸದ್ಯ ಈ ಬೇಡಿಕೆ ಸಮ್ಮತಿಸಿದ ಕೆಎಂಎಫ್, ಕೆ.ಜಿ.ಗೆ 470 ರೂ. ದರದಂತೆ ಸೆಪ್ಟೆಂಬರ್ 20 ರಿಂದ ತುಪ್ಪ ಪೂರೈಸಲು ಒಪ್ಪಿಕೊಂಡಿದೆ. ಟೆಂಡರ್ ಷರತ್ತಿನ ಪ್ರಕಾರ ಮೂರು ತಿಂಗಳಲ್ಲಿ 350 ಮೆಟ್ರಿಕ್ ಟನ್ ನಂದಿನಿ ತುಪ್ಪ ಸರಬರಾಜು ಮಾಡಬೇಕಿದೆ. ಆದರೆ, ಒಂದೇ ತಿಂಗಳಲ್ಲಿ ಈಗಾಗಲೇ 250 ಟನ್ ತುಪ್ಪ ಪೂರೈಕೆ ಮಾಡಲಾಗಿದೆ.
ನಂದಿನಿ ತುಪ್ಪ ಬಳಸುವ ಸಂದರ್ಭದಲ್ಲಿ ಲಡ್ಡು ಪರಿಮಳ ಅದ್ಭುತವಾಗಿತ್ತು. ರುಚಿಯೂ ಹೆಚ್ಚಾಗಿತ್ತು. ಆದರೆ, ನಂದಿನಿ ತುಪ್ಪದ ಬಳಕೆ ನಿಲ್ಲಿಸಿದಾಗಿನಿಂದ ಸ್ವಾದ ಇಲ್ಲ ಎಂದು ಭಕ್ತರು ಆರೋಪಿಸಿದ್ದಾರೆ. ಈಗ ಮತ್ತೆ ನಂದಿನಿಯ ಘಮವನ್ನು ಭಕ್ತರು ಸವಿಯಬೇಕಾಗಿದೆ.
ಇನ್ನೊಂದೆಡೆ ಕರ್ನಾಟಕ ಮುಜರಾಯಿ ಇಲಾಖೆ ಕೂಡ ಪ್ರಸಾದ ತಯಾರಿಕೆಗೆ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ತನ್ನ ವ್ಯಾಪ್ತಿಯಲ್ಲಿನ ದೇವಸ್ಥಾನಗಳಿಗೆ ಸೂಚಿಸಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮೂಕಾಂಬಿಕೆ, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ಸೇರಿದಂತೆ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಈಗಾಗಲೇ ಪ್ರಸಾದಕ್ಕೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿದೆ. ಹೀಗಾಗಿ ರಿಟೇಲ್ ನಲ್ಲಿಯೂ ನಂದಿನಿ ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಇದರ ಮಧ್ಯೆ ಟಿಟಿಡಿ ಹೆಚ್ಚುವರಿ 250 ಟನ್ ನಂದಿನಿ ತುಪ್ಪಕ್ಕೆ ಕಳೆದ ವಾರ ಕೋರಿಕೆ ಸಲ್ಲಿಸಿದೆ. 350 ಟನ್ ತುಪ್ಪದ ಟೆಂಡರ್ ಕರಾರಿನಂತೆಯೇ ಅದೇ ಬೆಲೆಯಲ್ಲೇ ಕೆಎಂಎಫ್ 250 ಟನ್ ತುಪ್ಪ ಪೂರೈಸಲು ಕೆಎಂಎಫ್ ಮುಂದಾಗಿದೆ.