ಜೈಪುರ: ಪ್ರೀತಿ ಕುರುಡು ಎಂಬ ಮಾತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಬರೋಬ್ಬರಿ 70 ವರ್ಷಗಳ ಕಾಲ ಸಹಜೀವನ(ಲಿವ್ ಇನ್ ರಿಲೇಷನ್ ಶಿಪ್) ನಡೆಸುತ್ತಿದ್ದ ಹಿರಿಜೀವಗಳು ಕೊನೆಗೂ ತಮ್ಮ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಅಂದ ಹಾಗೆ, 70 ವರ್ಷ ಲಿವ್ ಇನ್ ಸಂಬಂಧದಲ್ಲಿದ್ದ ಈ ಜೋಡಿಯ ವಯಸ್ಸು ಎಷ್ಟಾಗಿರಬಹುದು ಎಂದು ನೀವು ಯೋಚಿಸುತ್ತಿದ್ದೀರಾ, ವರ ರಾಮಾ ಭಾಯಿ ಅಂಗಾರಿಗೆ 95 ವರ್ಷ, ವಧು ಜಿವಾಲಿ ದೇವಿಗೆ 90 ವರ್ಷ ವಯಸ್ಸು!
ತಮ್ಮ 70 ವರ್ಷಗಳ ಸಂಬಂಧದ ವೇಳೆ ಈ ದೀರ್ಘ ದಂಪತಿ ಒಟ್ಟು 8 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇವರಿಗೆ ಈಗ ಹಲವು ಮೊಮ್ಮಕ್ಕಳೂ ಇದ್ದಾರೆ. ಮಕ್ಕಳ ಪೈಕಿ ನಾಲ್ವರು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಹಿರಿಯ ಪುತ್ರ ಬಾಕು ಅಂಗಾರಿ(60) ರೈತ. ಎರಡನೇ ಮಗ ಶಿವರಾಮ್(55) ಮತ್ತು ಮೂರನೇ ಮಗ ಕಾಂತಿಲಾಲ್(52) ಶಿಕ್ಷಕರು. ಮತ್ತೊಬ್ಬ ಮಗ ಲಕ್ಷ್ಮಣ(52)ನೂ ಕೃಷಿಕ. ಪುತ್ರಿಯರಾದ ಸುನೀತಾ ಮತ್ತು ಅನಿತಾ ಕ್ರಮವಾಗಿ ಶಿಕ್ಷಕಿ ಹಾಗೂ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
70 ವರ್ಷಗಳ ಕಾಲ ಮದುವೆಯಾಗದೇ ಸಂಸಾರ ನಡೆಸುತ್ತಾ ಬಂದಿರುವ ರಾಮಾ ಭಾಯ್ ಮತ್ತು ಜಿವಾಲಿ ದೇವಿ ಇತ್ತೀಚೆಗಷ್ಟೇ ತಮ್ಮ ಸಂಬಂಧಕ್ಕೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಲು ನಿರ್ಧರಿಸಿದ್ದರು. ಅದಕ್ಕೆ ಮಕ್ಕಳೂ ಸಾಥ್ ಕೊಟ್ಟರು. ಹೀಗಾಗಿ ಗ್ರಾಮಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ವಿವಾಹ ನೆರವೇರಿತು.
ಅರಶಿನ ಶಾಸ್ತ್ರ, ಮೆಹಂದಿ ಮುಂತಾದ ಸಂಪ್ರದಾಯಗಳ ಜೊತೆಗೆ, ಡಿಜೆ, ನೃತ್ಯಗಳ ಮೂಲಕ ಪೂರ್ಣ ಪ್ರಮಾಣದ ಮದುವೆಯ ದಿಬ್ಬಣವೂ ನಡೆದಿದೆ. ಮಕ್ಕಳು, ಮೊಮ್ಮಕ್ಕಳ ಮುಂದೆಯೂ ಈ ಜೋಡಿ ಸಪ್ತಪದಿ ತುಳಿದಿದೆ. ಈ ವಿಶೇಷ ವಿವಾಹವನ್ನು ಇಡೀ ಗ್ರಾಮವೇ ಸಂಭ್ರಮಿಸಿದೆ. ಸಾವಿರಾರು ಮಂದಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿ ನವ ವಧು ವರರಿಗೆ ಶುಭ ಕೋರಿದ್ದಾರೆ. ಕಾರ್ಯಕ್ರಮದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಒಟ್ಟಾರೆಯಾಗಿ, ಪ್ರೀತಿ ಸತ್ಯವಾಗಿದ್ದರೆ, ಅದಕ್ಕೆ ವ್ಯಾಲಿಡಿಟಿಯ ಅಗತ್ಯವಿಲ್ಲ ಎಂಬುದನ್ನು ಈ ಜೋಡಿ ಸಾರಿದೆ.