ಧಾರವಾಡ : ವೀರಶೈವ-ಲಿಂಗಾಯತ ಧರ್ಮದ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶಾಖಾಮಠ ತಾಲೂಕಿನ ಅಮ್ಮಿನಬಾವಿಯ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ 92ನೆಯ ವರ್ಧಂತಿ ಮಹೋತ್ಸವ ಆಗಸ್ಟ್ 13ರಂದು (ಬುಧವಾರ) ಮುಂಜಾನೆ 10 ಗಂಟೆಗೆ ಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ.
ಶ್ರೀಗಳ ಕಿರು ಪರಿಚಯ :
ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ 1939ರಲ್ಲಿ ತಮ್ಮ 5ನೆಯ ವರ್ಷದಲ್ಲಿಯೇ ಸಂಸ್ಥಾನ ಪಂಚಗೃಹ ಹಿರೇಮಠದ ಗುರುತ್ವಾಧಿಕಾರವನ್ನು ಹೊಂದಿದ್ದು, ಒಂದರ್ಥದಲ್ಲಿ ಅವರದು ಸಂಪೂರ್ಣ 92 ವಸಂತಗಳ ಸುದೀರ್ಘ ಸನ್ಯಾಸ. ಧರ್ಮ ಜಾಗೃತಿ ಕೈಂಕರ್ಯಕ್ಕೆ ಮೊದಲ ಆದ್ಯತೆ ನೀಡಿ, ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಇಷ್ಟಲಿಂಗಾನುಷ್ಠಾನಗೈದು ಭಕ್ತಗಣಕ್ಕೆ ಧರ್ಮದ ಅರಿವು ತುಂಬಿದ್ದಾರೆ. ಅಕ್ಷರ ಮತ್ತು ಪುಸ್ತಕ ಪ್ರೀತಿಯೊಂದಿಗೆ ಪ್ರಾಥಮಿಕ ಹಾಗೂ ಪೌಢ ಶಾಲೆಗಳನ್ನು ಆರಂಭಿಸಿ ಹಳ್ಳಿಗಾಡಿನ ಮಕ್ಕಳ ಶಾಲಾ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಶ್ರೀಗಳು ರಚಿಸಿರುವ 108 ವಚನಗಳ ‘ಶಾಂತೇಶ್ವರ ವಚನ ಸುಧೆ’ ಎಂಬ ಕೃತಿ ಪ್ರಕಟಗೊಂಡಿದೆ.
ಉಡಿತುಂಬುವ ಕಾರ್ಯಕ್ರಮ :
ಮಾತೆ ಆದಿಶಕ್ತಿಯ ಸ್ವರೂಪಿಗಳಾದ 121 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಶೋಭಾ ಯರಗಂಬಳಿಮಠ ಅವರಿಂದ ಜರುಗಲಿದೆ. ಮಠದ ಹಲವಾರು ಭಕ್ತರು ಶಾಂತಲಿಂಗ ಶ್ರೀಗಳಿಗೆ ವಿವಿಧ ತುಲಾಭಾರ ಸೇವೆ ಜರುಗಿಸಿ ಭಕ್ತಿ ಸಮರ್ಪಿಸಲಿದ್ದಾರೆ.