ನವದೆಹಲಿ: ಉತ್ತರ ಪೂರ್ವ ದೆಹಲಿಯ ನೆಹರೂ ವಿಹಾರ್ ಪ್ರದೇಶದಲ್ಲಿ ಶನಿವಾರ 9 ವರ್ಷದ ಬಾಲಕಿಯೊಬ್ಬಳ ಶವ ಸೂಟ್ಕೇಸ್ನಲ್ಲಿ ಪತ್ತೆಯಾಗಿದೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯು ದೆಹಲಿ ನಗರದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ಬಾಲಕಿ ಶನಿವಾರ ರಾತ್ರಿ ಸಂಬಂಧಿಕರ ಮನೆಗೆ ಭೇಟಿ ನೀಡಲು ಹೋಗಿದ್ದಳು. ಆದರೆ, ಎರಡು ಗಂಟೆಗಳ ನಂತರವೂ ಮನೆಗೆ ಮರಳಿರಲಿಲ್ಲ. ಆಕೆಯ ತಂದೆ ಮಗಳನ್ನು ಹುಡುಕಲು ಆರಂಭಿಸಿದಾಗ, ಯಾರೋ ಒಬ್ಬರು ಬಾಲಕಿಯನ್ನು ತಮ್ಮ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಫ್ಲಾಟ್ಗೆ ಹೋಗುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.
ತಂದೆಯು ಆ ಕಟ್ಟಡಕ್ಕೆ ತಲುಪಿದಾಗ, ಎರಡನೇ ಮಹಡಿಯ ಫ್ಲಾಟ್ ಹೊರಗಡೆಯಿಂದ ಬೀಗ ಹಾಕಿತ್ತು. ಅವರು ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದಾಗ, ತಮ್ಮ ಮಗಳು ಸೂಟ್ಕೇಸ್ ವೊಂದರಲ್ಲಿ ಬೆತ್ತಲೆಯಾಗಿ ಮತ್ತು ಚಲನರಹಿತವಾಗಿ ಮಲಗಿರುವುದನ್ನು ನೋಡಿ ಹೌಹಾರಿದ್ದಾರೆ. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆಕೆ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.
“ರಾತ್ರಿ 8:41ಕ್ಕೆ ದಯಾಲ್ಪುರ್ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಾಗ, ಒಂದು ತಂಡವನ್ನು ನೆಹರೂ ವಿಹಾರ್ನ ಗಲಿ ನಂ. 2ಕ್ಕೆ ಕಳುಹಿಸಲಾಯಿತು. ಅಷ್ಟರಲ್ಲೇ ಬಾಲಕಿಯ ತಂದೆ ಆಕೆಯನ್ನು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“ವೈದ್ಯರಿಗೆ ಬಾಲಕಿಯ ಮುಖದ ಮೇಲೆ ಗಾಯದ ಗುರುತುಗಳು ಕಂಡುಬಂದಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ಸಾಧ್ಯತೆಯಿದೆ ಎಂದಿದ್ದಾರೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಣೆ (POCSO) ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಹಲವು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.