ಆತಂಕದ ಘಟನೆಯೊಂದು ಬೆಳಕಿಗೆ ಬಂದಿದ್ದು, 14 ತಿಂಗಳಲ್ಲಿ 9 ಮಹಿಳೆಯರನ್ನು ಹತ್ಯೆ ಮಾಡಿ ದುಷ್ಕರ್ಮಿಗಳು ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಎಲ್ಲಾ ಕೊಲೆಗಳು ಕೇವಲ ಉತ್ತರ ಪ್ರದೇಶದ ಬರೇಲಿಯಲ್ಲಿನ 25 ಕಿ.ಮೀ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಎಲ್ಲಾ ಕೊಲೆಯ ಹಿಂದೆ ಒಂದೇ ಗುಂಪಿನ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
45 ರಿಂದ 55 ವರ್ಷ ವಯಸ್ಸಿನ ಎಲ್ಲಾ ಮಹಿಳೆಯರು, ಮಧ್ಯಾಹ್ನದ ಸುಮಾರಿಗೆ ಹೊಲಗಳಲ್ಲಿ ಕತ್ತು ಹಿಸುಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಟ್ಟೆಗಳು ಎಲ್ಲವೂ ಸರಿಯಾಗೇ ಇದ್ದವು. ಹೀಗಾಗಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆರು ತಿಂಗಳಿನಿಂದ ಪೊಲೀಸರು ಈ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ ಎಂದು ಯುಪಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಚಿನ್ನಾಭರಣ ದೋಚಿರುವ ಶಂಕೆ ವ್ಯಕ್ತವಾಗಿದೆ. ಒಂದೇ ವ್ಯಾಪ್ತಿಯಲ್ಲಿ ನಡೆದಿರುವ ಕಾರಣ ಸೀರಿಯಲ್ ಕಿಲ್ಲರ್ಸ್ ಕೃತ್ಯವಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ, ಭಾರತದಲ್ಲಿನ ಇತರ ಕುಖ್ಯಾತ ಸೀರಿಯಲ್ ಕಿಲ್ಲರ್ಪ್ರಕರಣಗಳಿಗೆ ಈ ಘಟನೆಗಳನ್ನು ಹೋಲಿಕೆ ಮಾಡಲಾಗಿದೆ.
ರವೀಂದರ್ ಕುಮಾರ್ ಎಂಬ ಕಾಮುಕ 2015 ರಲ್ಲಿ ಆರು ವರ್ಷದ ಬಾಲಕಿಯ ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿ ಸಿಕ್ಕಿ ಬಿದ್ದಿದ್ದ. ಆನಂತರ ಆತ ಎಂಟು ವರ್ಷಗಳ ಅವಧಿಯಲ್ಲಿ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದಾದ್ಯಂತ ಕನಿಷ್ಠ 30 ಮಕ್ಕಳನ್ನು ಅತ್ಯಾಚಾರ ಮಾಡಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದ. ಈಗ ಸರಣಿ ಕೊಲೆಗಳು ಬೆಳಕಿಗ ಬರುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.