ನವದೆಹಲಿ: ನಮ್ಮ ಆರೋಗ್ಯ ಸುಧಾರಿಸಲಿ ಎಂದು ಮಾತ್ರೆಗಳು ಸೇರಿ ವಿವಿಧ ರೀತಿಯ ಔಷಧಗಳನ್ನು ಸೇವಿಸುತ್ತೇವೆ. ಆದರೆ, ಮಾರುಕಟ್ಟೆಯಲ್ಲಿ ನಕಲಿ ಮಾತ್ರೆಗಳ ಹಾವಳಿ ಜಾಸ್ತಿಯಾಗಿರುವ ಕಾರಣ ಇವುಗಳನ್ನು ತೆಗೆದುಕೊಂಡರೆ ಆರೋಗ್ಯ ಇನ್ನಷ್ಟು ಹದಗೆಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಮಾರುಕಟ್ಟೆಯಲ್ಲಿ 84 ರೀತಿಯ ನಕಲಿ ಔಷಧಗಳು ಇವೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.
ಹೌದು, ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) ಮಾರುಕಟ್ಟೆಯಲ್ಲಿ 84 ನಕಲಿ ಮಾತ್ರೆಗಳು ಇವೆ ಎಂದು ಎಚ್ಚರಿಕೆ ನೀಡಿದೆ. ಕಳೆದ ಡಿಸೆಂಬರ್ ನಲ್ಲಿ ಉತ್ಪಾದನೆ ಮಾಡಲಾದ ಮಾತ್ರೆಗಳನ್ನು CDSCO ತಪಾಸಣೆ ಮಾಡಿದೆ. ಇದರಲ್ಲಿ ಸುಮಾರು 84 ಔಷಧಗಳು ಗುಣಮಟ್ಟದ ತಪಾಸಣೆಯಲ್ಲಿ ವಿಫಲವಾಗಿವೆ. ಹಾಗಾಗಿ, ಇವುಗಳನ್ನು ನಕಲಿ ಎಂದು CDSCO ಘೋಷಣೆ ಮಾಡಿದೆ.
ಹಲವು ಕಂಪನಿಗಳು ಉತ್ಪಾದಿಸುವ ಮಾತ್ರೆಗಳು ನಕಲಿ ಎಂಬುದು ಸಾಬೀತಾಗಿದೆ. ಅಸಿಡಿಟಿ, ಸಕ್ಕರೆ ಕಾಯಿಲೆ, ಹೆಚ್ಚಿನ ಕೊಲೆಸ್ಟ್ರಾಲ್ ಸೇರಿ ಹಲವು ಕಾಯಿಲೆಗಳಿಗೆ ಬಳಸುವ ಮಾತ್ರೆಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿವೆ. ಹಾಗಾಗಿ, ಇವುಗಳನ್ನು ತೆಗೆದುಕೊಳ್ಳುವಾಗ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು CDSCO ತಿಳಿಸಿದೆ.
CDSCO ಸಂಸ್ಥೆಯು ಪ್ರತಿ ತಿಂಗಳು ಔಷಧಗಳ ಗುಣಮಟ್ಟ ಪರೀಕ್ಷೆ ಮಾಡುತ್ತದೆ. ಸುಮಾರು 10 ಔಷಧಗಳನ್ನು ಪಡೆಯುವ ಸಂಸ್ಥೆಯು, ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸುತ್ತದೆ. ಅಲ್ಲಿ ಕೂಲಂಕಷವಾಗಿ ತಪಾಸಣೆ ಮಾಡಿದ ಬಳಿಕ ಔಷಧದ ಗುಣಮಟ್ಟವನ್ನು ಅಳೆಯಲಾಗುತ್ತದೆ. ಅದಾದ ಬಳಿಕವೇ ಮಾತ್ರೆಗಳು ಸುರಕ್ಷಿತವೋ, ಅಲ್ಲವೋ ಎಂಬುದನ್ನು ನಿರ್ಧರಿಸಲಾಗುತ್ತದೆ.