ಬೆಂಗಳೂರು: ದೇಶದಲ್ಲಿ ನಿರುದ್ಯೋಗ ಪರ್ವ ಆರಂಭವಾಗಿದೆ. ಒಂದೆಡೆ, ಇನ್ಫೋಸಿಸ್ ಸೇರಿ ದೊಡ್ಡ ದೊಡ್ಡ ಕಂಪನಿಗಳು ಸಾವಿರಾರು ಉದ್ಯೋಗಿಗಳು ಕೆಲಸದಿಂದ ವಜಾಗೊಳಿಸುತ್ತಿವೆ. ಮತ್ತೊಂದೆಡೆ, ಪದವೀಧರರು ಉದ್ಯೋಗ ಸಿಗದೆ ಒದ್ದಾಡುವಂತಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ದೇಶದಲ್ಲಿ ಶೇ.83ರಷ್ಟು ಪದವೀಧರರು (Engineering Jobs) ಈಗ ನಿರುದ್ಯೋಗಿಗಳಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಇದು ಈಗ ಭಾರಿ ಆತಂಕ ಮೂಡಿಸಿದೆ.
ಅನ್ ಸ್ಟಾಪ್ ಎಂಬ ಕಂಪನಿಯು 2025ರ ಟ್ಯಾಲೆಂಟ್ ರಿಪೋರ್ಟ್ ಬಿಡುಗಡೆ ಮಾಡಿದೆ. ಸುಮಾರು 30 ಸಾವಿರ ಜೆನ್ ಝಡ್ ಉದ್ಯೋಗಿಗಳು ಹಾಗೂ 700 ಎಚ್ ಆರ್ ಗಳನ್ನು ಸಂಪರ್ಕಿಸಿ ವರದಿ ತಯಾರಿಸಿದೆ. ಅದರಂತೆ, ದೇಶದಲ್ಲಿ ಶೇ.83ರಷ್ಟು ಪದವೀಧರರಿಗೆ ಉದ್ಯೋಗವೇ ಸಿಕ್ಕಿಲ್ಲ. ಹಾಗೆಯೇ, ಬಿ-ಸ್ಕೂಲ್ ಗಳಲ್ಲಿ ಬಿಸಿನೆಸ್ ಮ್ಯಾನೇಜ್ ಮೆಂಟ್ ಅಧ್ಯಯನ ಮಾಡಿದ ಪದವೀಧರರಲ್ಲಿ ಶೇ.50ರಷ್ಟು ಅಭ್ಯರ್ಥಿಗಳು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ ಎಂದು ವರದಿ ತಿಳಿಸಿದೆ.
ಬಿಸಿನೆಸ್ ಮ್ಯಾನೇಜ್ ಮೆಂಟ್ ಅಧ್ಯಯನ ಮಾಡಿದ ಪದವೀಧರರಿಗೆ ಇಂಟರ್ನ್ ಶಿಪ್ ಕೂಡ ಸಿಕ್ಕಿಲ್ಲ. ಎಂಟು ಪದವೀಧರರಲ್ಲಿ ಒಬ್ಬರಿಗೆ ಮಾತ್ರ ಇಂಟರ್ನ್ ಶಿಪ್ ಸಿಕ್ಕಿದೆ. ಇಂಟರ್ನ್ ಶಿಪ್ ಮಾಡಿದವರಲ್ಲೇ ಹೆಚ್ಚಿನ ಜನರಿಗೆ ಉದ್ಯೋಗ ಸಿಕ್ಕಿಲ್ಲ ಎಂದು ವರದಿಯಿಂದ ಬಹಿರಂಗವಾಗಿದೆ. ಇದರಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಹಾಗೂ ಎಂಬಿಎ ಸೇರಿ ಬಿಸಿನೆಸ್ ಮ್ಯಾನೇಜ್ ಮೆಂಟ್ ಕೋರ್ಸ್ ಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಿರುದ್ಯೋಗಕ್ಕೆ ಕಾರಣಗಳೇನು?
ಹಲವು ಕಂಪನಿಗಳಲ್ಲಿ ನೇಮಕಾತಿ ಕಡಿಮೆಯಾಗಿದೆ. ಅದರಲ್ಲೂ, ಜೆನ್ ಝಡ್ ಜನರೇಷನ್ ಯುವಕರಲ್ಲಿ ಕೌಶಲಗಳು ಇಲ್ಲ ಎಂದು ಕಂಪನಿಗಳು ನೇಮಕಾತಿ ಮಾಡುತ್ತಿಲ್ಲ. ಇನ್ನು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ವಿಷಯಗಳಿಗೂ, ಕಂಪನಿಗಳಲ್ಲಿ ಕೆಲಸ ಮಾಡುವ ವಿಧಾನಕ್ಕೂ ಅಜಗಜಾಂತರ ಇದೆ. ಇನ್ನು ಬಿಸಿನೆಸ್ ಮ್ಯಾನೇಜ್ ಮೆಂಟ್ ಅಧ್ಯಯನ ಮಾಡಿದವರಿಗೆ ಕೆಲಸ ಸಿಗದಿರಲು ಕೂಡ ಹಲವು ಕಾರಣಗಳಿವೆ. ದೊಡ್ಡ ದೊಡ್ಡ ಕಂಪನಿಗಳು ಪ್ರತಿಷ್ಠಿತ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಕ್ಯಾಂಪಸ್ ಇಂಟರ್ ವ್ಯೂ ನಡೆಸುತ್ತಿರುವ ಕಾರಣ ಸಣ್ಣಪುಟ್ಟ ನಗರ, ಪಟ್ಟಣಗಳಲ್ಲಿ ಓದಿದವರಿಗೆ ಬೆಲೆ ಇಲ್ಲದಂತಾಗಿದೆ ಎಂದು ವರದಿ ತಿಳಿಸಿದೆ.