ಕಾಬೂಲ್ : ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಮರಣದಂಡನೆ ಪ್ರಕ್ರಿಯೆಯು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ತನ್ನ ಕುಟುಂಬದ 13 ಸದಸ್ಯರನ್ನು ಬರ್ಬರವಾಗಿ ಹತ್ಯೆಗೈದ ಅಪರಾಧಿಗೆ, ಮೃತ ಕುಟುಂಬದ ಸದಸ್ಯನಾದ 13 ವರ್ಷದ ಬಾಲಕನೊಬ್ಬನೇ ಸಾರ್ವಜನಿಕವಾಗಿ ಗುಂಡಿಕ್ಕಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಿದ್ದಾನೆ. ತಾಲಿಬಾನ್ ಆಡಳಿತದ ಈ ‘ಕಣ್ಣಿಗೆ ಕಣ್ಣು’ ನ್ಯಾಯದಾನದ ಪ್ರಕ್ರಿಯೆಯನ್ನು ವೀಕ್ಷಿಸಲು ಖೋಸ್ಟ್‌ನ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬರೋಬ್ಬರಿ 80,000 ಮಂದಿ ಜಮಾಯಿಸಿದ್ದರು ಎಂದು ವರದಿಗಳು ತಿಳಿಸಿವೆ.
ಮರಣದಂಡನೆಗೊಳಗಾದ ವ್ಯಕ್ತಿಯನ್ನು ಮಂಗಲ್ ಎಂದು ಗುರುತಿಸಲಾಗಿದೆ. ಈತ ಸುಮಾರು ಹತ್ತು ತಿಂಗಳ ಹಿಂದೆ ಖೋಸ್ಟ್ ನಿವಾಸಿ ಅಬ್ದುಲ್ ರಹಮಾನ್ ಹಾಗೂ ಆತನ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು 13 ಜನರನ್ನು ಹತ್ಯೆಗೈದಿದ್ದನು. ಮೃತಪಟ್ಟವರಲ್ಲಿ ಒಂಬತ್ತು ಮಕ್ಕಳು ಸೇರಿದ್ದರು ಎಂಬುದು ಘಟನೆಯ ಭೀಕರತೆಯನ್ನು ತೋರಿಸುತ್ತದೆ. ಈ ಪ್ರಕರಣದ ವಿಚಾರಣೆ ನಡೆಸಿದ ಅಫ್ಘಾನಿಸ್ತಾನದ ಸುಪ್ರೀಂ ಕೋರ್ಟ್, ಇಸ್ಲಾಮಿಕ್ ಶರಿಯಾ ಕಾನೂನಿನಡಿಯಲ್ಲಿ ‘ಕಿಸಾಸ್’ (ಸೇಡಿಗೆ ಸೇಡು ಅಥವಾ ಪ್ರತೀಕಾರ) ತತ್ವದ ಅನ್ವಯ ಮರಣದಂಡನೆ ವಿಧಿಸಿತ್ತು. ಇದಕ್ಕೆ ತಾಲಿಬಾನ್‌ನ ಪರಮೋಚ್ಚ ನಾಯಕ ಹಿಬಾತುಲ್ಲಾ ಅಖುಂದ್ಜಾದಾ ಅಂತಿಮ ಅನುಮೋದನೆ ನೀಡಿದ್ದರು.
ಶಿಕ್ಷೆಯ ಜಾರಿಯ ವೇಳೆ ಕ್ರೀಡಾಂಗಣವು ಜನರಿಂದ ಕಿಕ್ಕಿರಿದು ತುಂಬಿತ್ತು. ತಾಲಿಬಾನ್ ಅಧಿಕಾರಿಗಳ ಪ್ರಕಾರ, ಮೃತ ಸಂತ್ರಸ್ತರ ಕುಟುಂಬಕ್ಕೆ ಅಪರಾಧಿಯನ್ನು ಕ್ಷಮಿಸುವ ಆಯ್ಕೆಯನ್ನು ನೀಡಲಾಗಿತ್ತು. ಕ್ಷಮಾದಾನ ನೀಡಿದ್ದರೆ ಮಂಗಲ್‌ನ ಪ್ರಾಣ ಉಳಿಯುತ್ತಿತ್ತು. ಆದರೆ, ಸಂತ್ರಸ್ತ ಕುಟುಂಬವು ಕ್ಷಮಿಸಲು ನಿರಾಕರಿಸಿ, ಮರಣದಂಡನೆಯೇ ಆಗಬೇಕೆಂದು ಪಟ್ಟು ಹಿಡಿಯಿತು. ಅಂತಿಮವಾಗಿ, ಸಂತ್ರಸ್ತ ಕುಟುಂಬದ 13 ವರ್ಷದ ಬಾಲಕನ ಕೈಗೆ ಬಂದೂಕು ನೀಡಲಾಯಿತು. ಆ ಬಾಲಕ ಅಪರಾಧಿಯ ಮೇಲೆ ಗುಂಡು ಹಾರಿಸುವ ಮೂಲಕ ಶಿಕ್ಷೆಯನ್ನು ಜಾರಿಗೊಳಿಸಿದನು. ಕ್ರೀಡಾಂಗಣದಲ್ಲಿ ಐದು ಸುತ್ತು ಗುಂಡಿನ ಸದ್ದು ಕೇಳಿಸುತ್ತಿದ್ದಂತೆಯೇ, ಅಲ್ಲಿ ನೆರೆದಿದ್ದ ಜನಸಮೂಹ ಧಾರ್ಮಿಕ ಘೋಷಣೆಗಳನ್ನು ಕೂಗಿತು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ನಂತರ, ನ್ಯಾಯಾಲಯದ ಆದೇಶದ ಮೇರೆಗೆ ನಡೆದ 11ನೇ ಅಧಿಕೃತ ಮರಣದಂಡನೆ ಇದಾಗಿದೆ. 1990ರ ದಶಕದ ತಮ್ಮ ಹಿಂದಿನ ಆಳ್ವಿಕೆಯಂತೆಯೇ ತಾಲಿಬಾನ್ ಸರ್ಕಾರವು ಸಾರ್ವಜನಿಕ ಮರಣದಂಡನೆ, ಚಾಟಿಯೇಟು ಮತ್ತು ಕಠಿಣ ದೈಹಿಕ ಶಿಕ್ಷೆಗಳನ್ನು ಮತ್ತೆ ಜಾರಿಗೆ ತಂದಿದೆ. “ಇದು ಅಲ್ಲಾಹನ ಆಜ್ಞೆಯನ್ನು ಭೂಮಿಯ ಮೇಲೆ ಜಾರಿಗೊಳಿಸುವ ಇಸ್ಲಾಮಿಕ್ ವ್ಯವಸ್ಥೆಯಾಗಿದೆ ಮತ್ತು ಇದು ಯಾರಿಗೂ ಹೆದರುವುದಿಲ್ಲ” ಎಂದು ಕಾಬೂಲ್ ಮೂಲದ ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ಸಾರ್ವಜನಿಕ ಮರಣದಂಡನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಅಫ್ಘಾನಿಸ್ತಾನದ ಮಾನವ ಹಕ್ಕುಗಳ ವಿಶ್ವಸಂಸ್ಥೆಯ ವಿಶೇಷ ವರದಿಗಾರ ರಿಚರ್ಡ್ ಬೆನೆಟ್ ಇದನ್ನು “ಅಮಾನವೀಯ ಮತ್ತು ಕ್ರೂರ” ಎಂದು ಟೀಕಿಸಿದ್ದು, ಇಂತಹ ಸಾರ್ವಜನಿಕ ಶಿಕ್ಷೆಗಳು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಮರಣದಂಡನೆ ಜಾರಿಗೊಳಿಸಲು 13 ವರ್ಷದ ಬಾಲಕನನ್ನು ಬಳಸಿಕೊಂಡಿರುವುದಕ್ಕೆ ಹಕ್ಕು ಹೋರಾಟಗಾರರು ಆಘಾತ ವ್ಯಕ್ತಪಡಿಸಿದ್ದಾರೆ. “ಮಕ್ಕಳನ್ನು ಇಂತಹ ಭೀಕರ ದೃಶ್ಯಗಳಲ್ಲಿ ಭಾಗಿಯಾಗುವಂತೆ ಮಾಡುವುದು ಹಿಂಸೆಯ ಹೊಸ ಪೀಳಿಗೆಯನ್ನು ಸೃಷ್ಟಿಸಿದಂತೆ,” ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಗೋಲ್ಚೆಹ್ರಾ ಯಾಫ್ಟಾಲಿ ಕಳವಳ ವ್ಯಕ್ತಪಡಿಸಿದ್ದಾರೆ .
ಇದನ್ನೂ ಓದಿ : ‘ದಿತ್ವಾ’ ಚಂಡಮಾರುತಕ್ಕೆ ನಲುಗಿದ ಶ್ರೀಲಂಕಾ | 70ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿದ ಭಾರತ!



















