ಕಾರವಾರ : ʼಉತ್ತರ ಕನ್ನಡ ಒಳಗೊಂಡು ಗುಡ್ಡ ಕುಸಿತ, ಕಡಲು ಕೊರೆತ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು 800 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಆರು ಜಿಲ್ಲೆಗಳಲ್ಲಿ ಗುಡ್ಡಕುಸಿತ ಸಮಸ್ಯೆ ತೀವ್ರವಾಗಿದೆ. ತಡೆಗೋಡೆ ನಿರ್ಮಾಣದ ಕೆಲಸ ಮಾಡಬೇಕಿದೆ. ಇದಕ್ಕಾಗಿ 500 ಕೋಟಿ ಮೀಸಲಿಡಲಾಗುತ್ತದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲು ಕೊರೆತ ಸಮಸ್ಯೆ ತಡೆಗೆ 300 ಕೋಟಿ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.
ತಡೆಗೋಡೆ ನಿರ್ಮಾಣ ಒಳಗೊಂಡು ಪ್ರಕೃತಿ ವಿಕೋಪ ತಡೆಗೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆಯಾಗಲು ವಿಳಂಬವಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದವರು ತಿಳಿಸಿದ್ದಾರೆ.
ರಾಜ್ಯದ ಸುಮಾರು 1500 ಸ್ಥಳಗಳಲ್ಲಿ ಮಳೆ ಮಾಪನ ಕೇಂದ್ರಗಳು ದುಸ್ಥಿತಿಯಲ್ಲಿದೆ. ಅವುಗಳನ್ನು ದುರಸ್ತಿ ಮಾಡಿಸುವ ಕೆಲಸ ಮಾಡಬೇಕಿದೆ. ಯಂತ್ರಗಳು ಸಂಪೂರ್ಣ ಹಾಳಾಗಿದ್ದರೆ ಹೊಸ ಯಂತ್ರಗಳನ್ನು ಅಳವಡಿಸುವ ಕಾರ್ಯವೂ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ಶಿರಸಿ ತಾಲೂಕಿನ ಬೆಣ್ಣೆಹೊಳೆ ಸೇತುವೆ, ಗುಡ್ಡಕುಸಿತ ಸಂಭವಿಸಿರುವ ಕುಮುಟಾ ತಾಲೂಕಿನ ದೇವಿಮನೆ ಘಟ್ಟ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ದೇವಿಮನೆ ಘಟ್ಟದಲ್ಲಿ ತಡೆಗೋಡೆ ನಿರ್ಮಿಸದೆ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡಿದ್ದಕ್ಕೆ ಆರ್.ಎನ್.ಎಸ್ ಇನ್‌ಫ್ರಾಸ್ಟಕ್ಚರ್ ಕಂಪೆನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


















