ಚಿಕ್ಕಬಳ್ಳಾಪುರ: ಪ್ರಿಯಕರನ ಜೊತೆಗಿದ್ದ 8 ತಿಂಗಳ ಗರ್ಭಿಣಿ ಅನಾಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಗುಂತಪನಹಳ್ಳಿ (Guntapanahalli) ಗ್ರಾಮದ ಹತ್ತಿರ ನಡೆದಿದೆ. ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ ಅನುಷಾ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗರ್ಭಿಣಿ. ನೇಣುಬಿಗಿದ ಸ್ಥಿತಿಯಲ್ಲಿ ಅನುಷಾ ದೇಹ ಪತ್ತೆಯಾಗಿದೆ. ಪ್ರಿಯಕರ ಪವನ್ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇದಕ್ಕೂ ಮುನ್ನ ಪವನ್, ಅನುಷಾಗೆ ವಿಷ ಕುಡಿಸಿದ್ದ ಎನ್ನಲಾಗಿದೆ. ಆದರೂ ಅನುಷಾ ಬದುಕುಳಿದಿದ್ದಳು. ಹೀಗಾಗಿ ಪವನ್ ಮೇಲೆ ಶಂಕೆ ವ್ಯಕ್ತವಾಗಿದೆ. ಅನುಷಾ ಹೊಸಕೋಟೆ ಮೂಲದ ವ್ಯಕ್ತಿಯೊಂದಿಗೆ ಕಳೆದ 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಹೆಣ್ಣು ಮಗು ಸಹ ಇತ್ತು. ಆದರೆ ಗಂಡನಿಗೆ ಪ್ಯಾರಾಲಿಸಿಸ್ ಆದ ನಂತರ ಗಂಡನನ್ನು ತೊರೆದು ಅನುಷಾ ತವರು ಮನೆಗೆ ಬಂದಿದ್ದಳು.
ತವರು ಮನೆಯಲ್ಲಿ ಕೂಲಿ ಮಾಡಿಕೊಂಡು ಇದ್ದಳು. ಈ ವೇಳೆ ಗುಂತಪನಹಳ್ಳಿ ಗ್ರಾಮದ ಪವನ್ ಎಂಬಾತನ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿದೆ. ಆಗ ಗರ್ಭಿಣಿ ಕೂಡ ಆಗಿದ್ದಾಳೆ. ಹೀಗಾಗಿ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆದರೆ, ಇದಕ್ಕೆ ಪವನ್ ಮನೆಯವರು ಒಪ್ಪಿಲ್ಲ. ಆದರೆ, ಅನುಷಾ ಮತ್ತೆ ಮತ್ತೆ ಒತ್ತಡ ಹಾಕುವುದಕ್ಕೆ ಪವನ್ ಕಳೆದ 15 ದಿನಗಳ ಹಿಂದೆ ಇಲಿ ಪಾಷಾಣ ನೀಡಿ ಕೊಲ್ಲಲು ಯತ್ನಿಸಿದ್ದ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಕುರಿತು ಆರೋಪಿಸಿ ಅನುಷಾ ದೂರು ನೀಡಿದ್ದಳು. ಆನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದು ಇಬ್ಬರೂ ಒಂದೇ ಕಡೆ ವಾಸಿಸುತ್ತಿದ್ದರು. ಆದರೆ, ಈಗ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅನುಷಾ ಪತ್ತೆಯಾಗಿದ್ದು, ಪವನ್ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪವನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.