ಸೈಟ್ ಹಗರಣ ಸಿಎಂ ಸಿದ್ದರಾಮಯ್ಯರಿಗೆ ಬೆನ್ನು ಬಿದ್ದಂತಿದೆ. ಅದು ಈಗ ಸಿದ್ದರಾಮಯ್ಯರಿಗೆ ಬೇತಾಳವಾಗಿ ಬಿಟ್ಟಿದೆ. ಹಲವು ವರ್ಷಗಳ ಅವರ ರಾಜಕಾರಣದಲ್ಲಿ ತಪ್ಪು ಹಿಡಿದು ಜಡಿಯಬೇಕೆಂದು ಕಾಯುತ್ತಿದ್ದ ವಿರೋಧಿಗಳಿಗೆ ಈಗ ಅಸ್ತ್ರ ಸಿಕ್ಕಂತಾಗಿದೆ.
ಸಿದ್ದರಾಮಯ್ಯ ಅವರ ಪತ್ನಿಗೆ ದಾನವಾಗಿ ಸಿಕ್ಕಿರುವ 3.16 ಎಕರೆ ಜಮೀನಿಗೆ ಪರಿಹಾರಕ್ಕೆ ಪರ್ಯಾಯವಾಗಿ 62 ಕೋಟಿ ರೂ. ಕೇಳಿರುವ ಸಿದ್ದರಾಮಯ್ಯ ಅವರ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆಗೆ ನಿಲ್ಲುವ ಸಂದರ್ಭದಲ್ಲಿ ಸಿದ್ದರಾಮಯ್ಯ ನೀಡಿದ ದಾಖಲೆಯಲ್ಲಿ ಆ ಆಸ್ತಿಯ ಮೌಲ್ಯವನ್ನು ಕೇವಲ 8.33 ಕೋಟಿ ಎಂದು ತೋರಿಸಿದ್ದಾರೆ. ಆದರೆ, ಸದ್ಯ ಆ ಆಸ್ತಿಯ ಮೌಲ್ಯ ದಿಢೀರಾಗಿ 62 ಕೋಟಿ ರೂ. ನೀಡುವಂತೆ ಕೇಳಿರುವುದು ಸಾಕಷ್ಟು ಕುತೂಹಲ, ಗೊಂದಲ ಹಾಗೂ ಅನುಮಾನಕ್ಕೆ ಕಾರಣವಾಗುತ್ತಿದೆ.

ಹೀಗಾಗಿಯೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಜಮೀನಿಗೆ ಪರ್ಯಾಯವಾಗಿ ಮುಡಾ ನೀಡಿರುವ 14 ನಿವೇಶನಗಳು ಈಗ ಚರ್ಚೆಯ ವಿಷಯವಾಗಿದೆ. ಆರೋಪಕ್ಕೆ ಕಾರಣವಾಗಿವೆ. 2023ರಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ವಿಧಾನಸಭಾ ಚುನಾವಣಾ ಅಫಿಡವಿಟ್‌ನಲ್ಲಿ ಮುಡಾ ನೀಡಿರುವ 14 ಸೈಟ್‌ಗಳನ್ನು ಉಲ್ಲೇಖಿಸಿ, ಅದರ ಮಾರುಕಟ್ಟೆ ಮೌಲ್ಯ 8.33 ಕೋಟಿ ರೂ. ಎಂದು ತೋರಿಸಿದ್ದಾರೆ. ಕೇವಲ ಒಂದು ವರ್ಷದಲ್ಲಿ ಇದರ ಮೌಲ್ಯ 62 ಕೋಟಿ ರೂ. ಆಗಿದ್ದು ಹೇಗೆ ಎಂದು ಈಗ ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ.
ಪಾರ್ವತಿ ಅವರ ಜಮೀನನ್ನು ಸ್ವಾಧೀನಪಡಿಸಿಕೊಂಡ ಕಾರಣಕ್ಕೆ 2020ರಲ್ಲಿ ಮುಡಾ 50:50 ಅನುಪಾತದಲ್ಲಿ 14 ನಿವೇಶನ ನೀಡಿತ್ತು. ಆದರೆ, ಇದಕ್ಕೂ ಮುನ್ನ 2018 ರ ಚುನಾವಣಾ ಅಫಿಡವಿಟ್‌ನಲ್ಲಿಯೂ ಸಿದ್ದರಾಮಯ್ಯ ಅವರು ಪತ್ನಿ ಹೆಸರಿನಲ್ಲಿ 3.16 ಎಕರೆ ಜಾಗ ಇರುವುದನ್ನು ನಮೂದಿಸಿ, ಅದರ ಮಾರುಕಟ್ಟೆ ಮೌಲ್ಯ 25 ಲಕ್ಷ ರೂ. ಎಂದು ತೋರಿಸಿದ್ದಾರೆ. ಆದರೆ, ಈಗ ಅದರ ಮೌಲ್ಯ ಮಾತ್ರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.

2010ರಲ್ಲಿ ಸಿಎಂ ಪತ್ನಿ ಪಾರ್ವತಿ ಅವರಿಗೆ ಅವರ ಸಹೋದರ ಮಲ್ಲಿಕಾರ್ಜುನ ಅವರಿಂದ ಕೆಸರೆ ಗ್ರಾಮದಲ್ಲಿದ್ದ 3.16 ಎಕರೆ ಜಾಗ ದಾನವಾಗಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು 2013ರ ವಿಧಾನಸಭಾ ಚುನಾವಣಾ ಅಫಿಡವಿಟ್‌ನಲ್ಲಿ ಪತ್ನಿಗೆ ಬಂದಿರುವ ಜಮೀನಿನ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ. ಆದರೆ, 2018ರಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಪತ್ನಿಗಿರುವ 3.16 ಎಕರೆ ಜಮೀನನ್ನು ಉಲ್ಲೇಖಿಸಿ, ಅದಕ್ಕೆ ಮಾರುಕಟ್ಟೆ ಮೌಲ್ಯ 25 ಲಕ್ಷ ರೂ. ಇರುವುದನ್ನು ಅಫಿಡವಿಟ್‌ನಲ್ಲಿ ತೋರಿಸಿದ್ದಾರೆ. 2023ರಲ್ಲಿ ವರುಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಮುಡಾ ಜಮೀನಿಗೆ ಬದಲಿಗೆ 50:50ರ ಅನುಪಾತದಲ್ಲಿ 14 ನಿವೇಶನ (ಒಟ್ಟು 37,190.09 ಚದರ ಅಡಿ)ವನ್ನು ಪಾರ್ವತಿ ಅವರಿಗೆ ವಿಜಯನಗರದಲ್ಲಿ ನೀಡಿರುವುದನ್ನು ಸಿದ್ದರಾಮಯ್ಯ ಅಫಿಡವಿಟ್‌ನಲ್ಲಿಇದನ್ನು ಉಲ್ಲೇಖಿಸಿ ಅದಕ್ಕೆ 8.35 ಕೋಟಿ ಮಾರುಕಟ್ಟೆ ಮೌಲ್ಯ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಪತ್ನಿ ಅವರ ಜಮೀನು ಇದ್ದದ್ದು ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ. ಆದರೆ, ಮುಡಾ ವಿಜಯನಗರದಲ್ಲಿ ನಿವೇಶನ ನೀಡಿದೆ. ವಿಜಯನಗರ 4ನೇ ಹಂತ ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿರುವವರ ವ್ಯಕ್ತಿಗಳ ಮಾಹಿತಿಯಂತೆ, ವಿಜಯನಗರ 4ನೇ ಹಂತದಲ್ಲಿ ಪ್ರತಿ ಚದರ ಅಡಿಗೆ 5-8 ಸಾವಿರ ರೂ. ಇದ್ದು, ದೇವನೂರು ಬಡಾವಣೆಯಲ್ಲಿ ಪ್ರತಿ ಚದರ ಅಡಿಗೆ 6 ಸಾವಿರ ರೂ. ವರೆಗೆ ಇದೆ. ಅತ್ಯಂತ ಬೆಲೆ ಬಾಳುವ ವಿಜಯನಗರ 4ನೇ ಹಂತದಲ್ಲಿ ಒಟ್ಟು 14 ನಿವೇಶನಗಳನ್ನು ಹಂಚಿಕೆ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದ ಆಕ್ರೋಶವೋ ಅಥವಾ ಕುತೂಹಲವೋ ತಿಳಿಯದಾಗಿದೆ.
2018ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಪತ್ನಿಗೆ ಸೇರಿರುವ 3.16 ಎಕರೆ ಜಮೀನಿಗೆ 25 ಲಕ್ಷ ಮಾರುಕಟ್ಟೆ ಮೌಲ್ಯವಿದೆ ಎಂದು ತೋರಿಸಿದ್ದಾರೆ. ಇದೀಗ ಏಕಾಏಕಿ 62 ಕೋಟಿ ರೂ. ಕೊಟ್ಟರೆ ಮರಳಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಆರ್ಥಿಕ ತಜ್ಞ, ದಾಖಲೆಯ ಬಜೆಟ್ ಮಂಡಿಸಿರುವ ಸಿಎಂ ಲೆಕ್ಕಾಚಾರವೇ ಅರ್ಥವಾಗುತ್ತಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.