ನವದೆಹಲಿ: ಭಾರತವು ಭಾನುವಾರ 76ನೇ ಗಣರಾಜ್ಯ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ದೇಶದ ಸೇನಾ ಶಕ್ತಿ, ನಾರಿ ಶಕ್ತಿ ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ನವದೆಹಲಿಯ ಕರ್ತವ್ಯಪಥದಲ್ಲಿ ಅನಾವರಣಗೊಂಡಿದೆ. ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವ ಮತ್ತಷ್ಟು ವಿಶೇಷ ಎನಿಸಿದೆ.
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೋ ಸುಬಿಯಾಂತೋ ಅವರು ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದು, ಅವರೊಂದಿಗೆ ಭಾರತಕ್ಕೆ ಬಂದಿರುವ 352 ಸದಸ್ಯರ ಇಂಡೋನೇಷ್ಯಾ ಮಾರ್ಚಿಂಗ್ ಬ್ಯಾಂಡ್ ಕೂಡ ಪಥಸಂಚಲನದಲ್ಲಿ ಭಾಗವಹಿಸಿದೆ.
ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿಯವರು ಕರ್ತವ್ಯಪಥಕ್ಕೂ ಆಗಮಿಸುವ ಮುನ್ನ ಮೂರೂ ಸೇನೆಗಳ ಮುಖ್ಯಸ್ಥರೊಂದಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವಾರ್ಪಣೆ ಮಾಡಿದರು. ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿ ಇಂಡೋನೇಷ್ಯಾ ಅಧ್ಯಕ್ಷ ಸುಬಿಯಾಂತೋ ಅವರೊಂದಿಗೆ ಕರ್ತವ್ಯಪಥಕ್ಕೆ ತಲುಪಿದರು.
‘ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್’ ಎಂಬ ಥೀಮ್ನಡಿ 31 ಸ್ತಬ್ಧಚಿತ್ರಗಳು ಕರ್ತವ್ಯಪಥದಲ್ಲಿ ಸಂಚರಿಸುವ ಮೂಲಕ ನೆರೆದವರ ಮನತಣಿಸಿದವು. ಈ ಪೈಕಿ ಕರ್ನಾಟಕದ ಲಕ್ಕುಂಡಿ ಸೇರಿದಂತೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 16, ಕೇಂದ್ರ ಸಚಿವಾಲಯಗಳ 15 ಟ್ಯಾಬ್ಲೋಗಳೂ ಇದ್ದವು. ಇದೇ ಮೊದಲ ಬಾರಿಗೆ ದೇಶದ ಮೂರೂ ಸೇನೆಗಳ ‘ಸಶಕ್ತ್ ಔರ್ ಸುರಕ್ಷಿತ್ ಭಾರತ್’ ಟ್ಯಾಬ್ಲೋ ಕೂಡ ಭಾಗಿಯಾಗಿದ್ದು, ರಕ್ಷಣಾ ಪಡೆಗಳ ನಡುವಿನ ಒಗ್ಗಟ್ಟಿನ ಬಲವನ್ನು ಸಾರಿತು. ಕರ್ತವ್ಯಪಥ ಪೂರ್ತಿ 5 ಸಾವಿರಕ್ಕೂ ಅಧಿಕ ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನ ನಡೆದಿರುವುದು ಕೂಡ ಈ ಬಾರಿಯ ವಿಶೇಷ. ಕೇಂದ್ರ ಸರ್ಕಾರದ ಜನ ಭಾಗೀದಾರಿ ತತ್ವದ ಅನ್ವಯ ಇಂದಿನ ಕಾರ್ಯಕ್ರಮ ವೀಕ್ಷಣೆಗೆಂದು ಸುಮಾರು 10,000 ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು.
ಬೆಳಗ್ಗೆ 10.30ಕ್ಕೆ ಆರಂಭವಾದ ಪಥಸಂಚಲನವು ಸುಮಾರು 90 ನಿಮಿಷಗಳ ಕಾಲ ನಡೆಯಿತು. ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ಸಂಗೀತ ಉಪಕರಣಗಳನ್ನು ಬಳಸಿಕೊಂಡು 300 ಮಂದಿ ಕಲಾವಿದರು ಸಾರೇ ಜಹಾನ್ ಸೇ ಅಚ್ಛಾ ಸಂಗೀತವನ್ನು ನುಡಿಸಿದ್ದು ಕಂಡುಬಂತು. ಇನ್ನು, ಟಿ-90 ಭೀಷ್ಮ ಟ್ಯಾಂಕ್, ನಾಗ್ ಕ್ಷಿಪಣಿ ವ್ಯವಸ್ಥೆ, ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ, ಪಿನಾಕಾ ಮಲ್ಟಿ-ಲಾಂಚರ್ ರಾಕೆಟ್ ವ್ಯವಸ್ಥೆ, ಆಕಾಶ್ ಶಸ್ತ್ರಾಸ್ತ್ರ ವ್ಯವಸ್ಥೆ, ಬಜರಂಗ್ ಮತ್ತು ಐರಾವತ ಮುಂತಾದ ಶಸ್ತ್ರಾಸ್ತ್ರಗಳು ದೇಶದ ರಕ್ಷಣಾ ಪಡೆಗಳ ಶಕ್ತಿಯನ್ನು ಅನಾವರಣಗೊಳಿಸಿದವು.
ಸೇನೆಯ ಮೂರೂ ಪಡೆಗಳ ನಿವೃತ್ತ ಮಹಿಳಾ ಅಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ರವೀಂದರ್ ಜೀತ್ ರಾಂಧವ, ಲೆ.ಕಮಾಂಡರ್ ಮಣಿ ಅಗರ್ವಾಲ್, ಫ್ಲೈಟ್ ಲೆಫ್ಟಿನೆಂಟ್ ರುಚಿ ಸಾಹಾ ಅವರು ಸೇನೆಯ ನಾರಿ ಶಕ್ತಿಯನ್ನು ಪ್ರತಿಬಿಂಬಿಸಿದರು. ಇವರಲ್ಲದೇ ಅಸಿಸ್ಟೆಂಟ್ ಕಮಾಂಡರ್ ಐಶ್ವರ್ಯಾ ಜೋಯ್ ಎಂ. ನೇತೃತ್ವದಲ್ಲಿ ಸಿಆರ್ಪಿಎಫ್ನ 148 ಸದಸ್ಯರ ಸರ್ವ ಮಹಿಳಾ ಪಡೆ ಕೂಡ ಪಥಸಂಚಲನದಲ್ಲಿ ಹೆಜ್ಜೆ ಹಾಕಿತು.
ಜನವರಿ 29ರಂದು ವಿಜಯ್ ಚೌಕ್ನಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.