ಜೌನ್‌ಪುರ್ (ಉತ್ತರ ಪ್ರದೇಶ): ಒಂಟಿತನವನ್ನು ದೂರ ಮಾಡಲು 75ನೇ ವಯಸ್ಸಿನಲ್ಲಿ 35ರ ಮಹಿಳೆಯ ಕೈಹಿಡಿದ ವೃದ್ಧರೊಬ್ಬರು, ಮದುವೆಯಾದ ಮರುದಿನವೇ ನಿಗೂಢವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಜೌನ್‌ಪುರ್ ಜಿಲ್ಲೆಯಲ್ಲಿ ನಡೆದಿದೆ. ಈ ಅನಿರೀಕ್ಷಿತ ಸಾವು ಇದೀಗ ಇಡೀ ಗ್ರಾಮದಲ್ಲಿ ತಲ್ಲಣ ಸೃಷ್ಟಿಸಿದ್ದು, ಮದುಮಗಳ ಮೇಲೆ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ.
ಕುಚ್‌ಮುಚ್ ಗ್ರಾಮದ ನಿವಾಸಿ, 75 ವರ್ಷದ ಸಂಗ್ರು ರಾಮ್ ಎಂಬ ರೈತ, ಒಂದು ವರ್ಷದ ಹಿಂದೆ ಪತ್ನಿಯನ್ನು ಕಳೆದುಕೊಂಡು ಒಂಟಿ ಜೀವನ ನಡೆಸುತ್ತಿದ್ದರು. ಮಕ್ಕಳಿಲ್ಲದ ಕಾರಣ, ಅವರಿಗೆ ಸಂಗಾತಿಯ ಅವಶ್ಯಕತೆ ಇತ್ತು. ಗ್ರಾಮಸ್ಥರು ಮತ್ತು ಕುಟುಂಬದವರು ವಿರೋಧ ವ್ಯಕ್ತಪಡಿಸಿದರೂ, ಸಂಗ್ರು ರಾಮ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿ, 35 ವರ್ಷದ ಮನ್‌ಭವತಿ ಎಂಬ ಮಹಿಳೆಯನ್ನು ಮದುವೆಯಾಗಲು ನಿಶ್ಚಯಿಸಿದ್ದರು.
ಸೋಮವಾರ, ಸಂಗ್ರು ರಾಮ್ ಮತ್ತು ಮನ್‌ಭವತಿ ಕೋರ್ಟ್‌ನಲ್ಲಿ ವಿವಾಹವಾಗಿ, ನಂತರ ಸ್ಥಳೀಯ ದೇವಸ್ಥಾನದಲ್ಲಿ ಸರಳ ಸಮಾರಂಭದಲ್ಲಿ ಹಾರ ಬದಲಾಯಿಸಿಕೊಂಡಿದ್ದರು. ಇದು ಮನ್‌ಭವತಿಗೂ ಎರಡನೇ ಮದುವೆಯಾಗಿದ್ದು, ಆಕೆಗೆ ಹಿಂದಿನ ಸಂಬಂಧದಿಂದ ಇಬ್ಬರು ಹೆಣ್ಣು ಮತ್ತು ಒಬ್ಬ ಗಂಡು ಮಗನಿದ್ದಾನೆ. ತನ್ನ ಮತ್ತು ಮಕ್ಕಳ ಜವಾಬ್ದಾರಿಯನ್ನು ಸಂಗ್ರು ರಾಮ್ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಮದುವೆಗೆ ಒಪ್ಪಿದ್ದಾಗಿ ಆಕೆ ಸ್ಥಳೀಯರಿಗೆ ತಿಳಿಸಿದ್ದಳು.
ಮದುವೆಯ ಸಂಭ್ರಮ ಒಂದು ದಿನವೂ ಉಳಿಯಲಿಲ್ಲ. ಮದುವೆಯಾದ ಮರುದಿನ ಬೆಳಿಗ್ಗೆ, ಸಂಗ್ರು ರಾಮ್ ಅವರ ಆರೋಗ್ಯ ಹಠಾತ್ತನೆ ಹದಗೆಟ್ಟಿತು. “ಮದುವೆಯ ರಾತ್ರಿ ನಾವು ತಡರಾತ್ರಿಯವರೆಗೂ ಮಾತನಾಡುತ್ತಿದ್ದೆವು. ಬೆಳಿಗ್ಗೆ ಅವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು,” ಎಂದು ಮನ್‌ಭವತಿ ಹೇಳಿದ್ದಾರೆ.
ಈ ಸಾವು ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೆಹಲಿಯಲ್ಲಿ ವಾಸವಾಗಿರುವ ಸಂಗ್ರು ರಾಮ್ ಅವರ ಸೋದರ ಸಂಬಂಧಿಗಳು, ಈ ಸಾವು ಸಹಜವಲ್ಲ, ಇದರ ಹಿಂದೆ ಸಂಚು ಅಡಗಿದೆ ಎಂದು ಆರೋಪಿಸಿದ್ದಾರೆ. ಅವರು ಸ್ಥಳಕ್ಕೆ ಬರುವವರೆಗೂ ಅಂತ್ಯಕ್ರಿಯೆ ನಡೆಸಬಾರದೆಂದು ತಡೆಹಿಡಿದಿದ್ದಾರೆ.
ಘಟನೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವೃದ್ಧಾಪ್ಯದ ಕಾರಣದಿಂದ ಇದು ಸಹಜ ಸಾವೇ? ಅಥವಾ ಆಸ್ತಿಗಾಗಿ ನಡೆದ ಸಂಚೇ? ಎಂಬ ಅನುಮಾನಗಳು ಗ್ರಾಮಸ್ಥರಲ್ಲಿ ಮೂಡಿವೆ. ಸದ್ಯಕ್ಕೆ, ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಅಥವಾ ಮರಣೋತ್ತರ ಪರೀಕ್ಷೆಗೆ ಆದೇಶಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ, ಮಧುಚಂದ್ರ ಕಾಣಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಸತ್ಯಾಂಶ ಹೊರಬೀಳಬೇಕಿದೆ.