ಬೆಂಗಳೂರು: ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಖಾಲಿ ಇರುವ 71 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಲ್ಯಾಬ್ ಇನ್ ಸ್ಟ್ರಕ್ಟರ್, ಲೈಬ್ರೇರಿಯನ್ ಹಾಗೂ ಪ್ರೋಗ್ರಾಮರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್ 11 ಕೊನೆಯ ದಿನವಾಗಿದೆ.
ಬೆಳಗಾವಿ, ಕಲಬುರಗಿ, ಮೈಸೂರು, ಮುದ್ದೇನಹಳ್ಳಿ ಮತ್ತು ಚಿಂತಾಮಣಿಯಲ್ಲಿರುವ ಕಾಲೇಜುಗಳಿಗೆ ಈ ನೇಮಕಾತಿ ನಡೆಯುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿಗೆ ಮಾತ್ರ ಈ ಹುದ್ದೆಯನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಲ್ಯಾಬ್ ಇನ್ ಸ್ಟ್ರಕ್ಟರ್ 66, ಲೈಬ್ರೇರಿಯನ್ 2 ಹಾಗೂ ಪ್ರೋಗ್ರಾಮರ್ 3 ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, ಬಿಬಿಎಂ, ಬಿಸಿಎ, ಬಿಇ, ಎಂಸಿಎ, ಎಂಎಸ್ಸಿ, ಎಂಬಿಎ, ಎಂಕಾಂ ಪೂರ್ಣಗೊಳಿಸಿರಬೇಕು. ಲೈಬ್ರರಿಯನ್ ಹುದ್ದೆಗೆ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ ಪಡೆದರಿರಬೇಕು. ಪ್ರೋಗ್ರಾಮರ್ ಹುದ್ದೆಗೆ ಡಿಪ್ಲೊಮಾ, ಬಿಇ, ಸ್ನಾತಕೋತ್ತರ ಪದವಿ, ಎಂಸಿಎ, ಎಂಎಸ್ಸಿ ಪದವಿ ಪೂರ್ಣಗೊಂಡಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುವುದು. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲಾತಿಯೊಂದಿಗೆ ಬೆಳಗಾವಿಯಲ್ಲಿನ ವಿಟಿಯು ಮುಖ್ಯ ಕಚೇರಿಯಲ್ಲಿ ನೇರ ಸಂದರ್ಶನ ಅಥವಾ ಆಫ್ಲೈನ್ ಸಂದರ್ಶನಕ್ಕೆ ಹಾಜರಾಗಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕಲಬುರಗಿ, ಮೈಸೂರು, ಮುದ್ದೇನಹಳ್ಳಿ, ಚಿಂತಾಮಣಿಯ ಕಾಲೇಜು ಕೇಂದ್ರದಲ್ಲಿ ಕೂಡ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ವಿಟಿಯುನ ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಸಂದರ್ಶನಕ್ಕೆ ಈ ಅರ್ಜಿಯನ್ನು ಕೊಂಡೊಯ್ಯುವುದು ಅವಶ್ಯಕ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 8 ರಿಂದ ಪ್ರಾರಂಭವಾಗಲಿದ್ದು, ಕಡೆಯ ದಿನಾಂಕ ಆಗಸ್ಟ್ 11 ಆಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು vtu.ac.in ಭೇಟಿ ನೀಡಬಹುದಾಗಿದೆ.