ತುಮಕೂರು: ನೀರಾವರಿ ಯೋಜನೆಯ ವಿದ್ಯುತ್ ಬಿಲ್ 70 ಲಕ್ಷ ರೂ. ಪಾವತಿಸುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಿದ್ದಗಂಗಾ ಮಠಕ್ಕೆ ಪತ್ರ ಬರೆದಿದೆ.
ಇದರ ಬೆನ್ನಲ್ಲೇ ಈಗ ಅಧಿಕಾರಿಗಳು ಮಠಕ್ಕೆ ಮೌಖಿಕವಾಗಿ ಸೂಚಿಸಿದ್ದಾರೆ. ಮಂಡಳಿಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಸಂಬಂಧಿಸಿದ ನೀರಾವರಿ ಯೋಜನೆಯೊಂದರ ವಿದ್ಯುತ್ ಬಿಲ್ ನ್ನು ನೀವು ಭರಿಸಲು ಕೋರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ, 70,31,438 ರೂ. ವಿದ್ಯುತ್ ಬಿಲ್ ಪಾವತಿಸಬೇಕೆಂದು ಉಲ್ಲೇಖಿಸಲಾಗಿದೆ. ಈ ಪತ್ರವನ್ನು ಕೆಐಎಡಿಬಿಯಿಂದ ಮಠಕ್ಕೆ ಹಲವು ತಿಂಗಳುಗಳ ಹಿಂದೆಯೇ ಬರೆಯಲಾಗಿದೆ. ಈಗ ಈ ಪತ್ರ ವೈರಲ್ ಆಗಿದೆ. ಈ ಕುರಿತು ಸ್ವಾಮೀಜಿ ಕೂಡ ಸ್ಪಷ್ಟನೆ ನೀಡಿದ್ದಾರೆ.
ತುಮಕೂರು ತಾಲ್ಲೂಕು ಹೊನ್ನೇನಹಳ್ಳಿ ಕೆರೆಯಿಂದ ಕೆಐಎಡಿಬಿ ಪೈಪ್ ಲೈನ್ ಮೂಲಕ ದೇವರಾಯನಪಟ್ಟಣಕ್ಕೆ ನೀರು ಹರಿಸಲಾಗಿತ್ತು. ಕೆರೆಯು ಸಿದ್ದಗಂಗಾ ಮಠದ ಪಕ್ಕದಲೇ ಇದೆ. ಮಠಕ್ಕೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಕೈಗೊಳ್ಳಲಾಗಿತ್ತು. ಈ ನೀರನ್ನು ಮಠವು ಉಪಯೋಗಿಸುತ್ತಿದೆ. 8 ತಿಂಗಳ ಹಿಂದೆ ಸಿದ್ದಗಂಗಾ ಮಠ ಪತ್ರ ಬಂದಿತ್ತು.
ಮಠವು ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದರು. ಈ ಕುರಿತು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಗಳು ಪ್ರತಿಕ್ರಿಯೆ ನೀಡಿದ್ದು, ನೀರಿಗೆ ಕರ ಹಾಕುವುದು ಸಹಜ. ಇಡೀ ಕೆರೆಗೆ ನೀರು ತುಂಬಿಸಿದ್ದರ ವಿದ್ಯುತ್ ಬಿಲ್ ನಾವೇ ಕಟ್ಟಬೇಕು ಎಂದು ಪತ್ರ ಬರೆದಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ.