ತಿರುವನಂತಪುರಂ : ಸಾಕ್ಷರತೆಯಲ್ಲಿ ಮುಂಚೂಣಿಯಲ್ಲಿರುವ, ದೇವರ ನಾಡೆಂದೇ ಕರೆಯಲ್ಪಡುವ ಕೇರಳ ರಾಜ್ಯದ ಜನಪ್ರತಿನಿಧಿಗಳ ಹಿನ್ನೆಲೆ ಮಾತ್ರ ಆಘಾತಕಾರಿಯಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ಕೇರಳ ಎಲೆಕ್ಷನ್ ವಾಚ್ ಜಂಟಿಯಾಗಿ ನಡೆಸಿರುವ ವಿಶ್ಲೇಷಣೆಯ ಪ್ರಕಾರ, ಕೇರಳದ ಹಾಲಿ ಶಾಸಕರಲ್ಲಿ ಶೇ.70ರಷ್ಟು ಮಂದಿಯ ವಿರುದ್ಧ ಕ್ರಿಮಿನಲ್ ಕೇಸುಗಳಿವೆ. ಅಷ್ಟೇ ಅಲ್ಲ, ರಾಜ್ಯದ ಅರ್ಧಕ್ಕಿಂತ ಹೆಚ್ಚು ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ ಎಂದೂ ತಿಳಿದುಬಂದಿದೆ. ಶಾಸಕರೇ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ಮಾಹಿತಿ ನೀಡಲಾಗಿದೆ.
ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳು
ವರದಿಯ ಪ್ರಕಾರ, ವಿಶ್ಲೇಷಣೆಗೆ ಒಳಪಡಿಸಲಾದ 132 ಶಾಸಕರಲ್ಲಿ 92 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ 33 ಶಾಸಕರು (ಶೇ. 25) ಕೊಲೆ, ಕೊಲೆ ಯತ್ನ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಗಂಭೀರ ಸ್ವರೂಪದ ಕೇಸ್‌ಗಳನ್ನು ಹೊಂದಿದ್ದಾರೆ. ಇಬ್ಬರು ಶಾಸಕರು ಐಪಿಸಿ ಸೆಕ್ಷನ್ 302 ರಡಿ ಕೊಲೆ ಪ್ರಕರಣವನ್ನು ಘೋಷಿಸಿಕೊಂಡಿದ್ದರೆ, ಮೂವರು ಕೊಲೆ ಯತ್ನದ ಆರೋಪ ಎದುರಿಸುತ್ತಿದ್ದಾರೆ. ಒಬ್ಬ ಶಾಸಕ ಅತ್ಯಾಚಾರದಂತಹ ಗಂಭೀರ ಪ್ರಕರಣವನ್ನೂ ಎದುರಿಸುತ್ತಿರುವುದಾಗಿ ವರದಿ ತಿಳಿಸಿದೆ.
ಪಕ್ಷವಾರು ಕಳಂಕಿತರ ಪಟ್ಟಿ
ರಾಜಕೀಯ ಪಕ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ಎಲ್ಲಾ ಪ್ರಮುಖ ಪಕ್ಷಗಳಲ್ಲೂ ಕ್ರಿಮಿನಲ್ ಹಿನ್ನೆಲೆಯ ಶಾಸಕರ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್‌ನ ಶೇ.90 ರಷ್ಟು (21ರಲ್ಲಿ 19) ಶಾಸಕರು ಕಳಂಕಿತರಾಗಿದ್ದರೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)ನ ಶೇ.86ರಷ್ಟು ಶಾಸಕರು, ಆಡಳಿತಾರೂಢ ಸಿಪಿಎಂ ಪಕ್ಷದ ಶೇ. 74 ರಷ್ಟು ಶಾಸಕರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕೋಟ್ಯಾಧಿಪತಿ ಶಾಸಕರ ಆಸ್ತಿ ವಿವರ
ಸಮೀಕ್ಷೆಯ ಪ್ರಕಾರ, ಕೇರಳದ 72 ಶಾಸಕರು (ಶೇ. 55) ಕೋಟ್ಯಾಧಿಪತಿಗಳಾಗಿದ್ದಾರೆ. ವಿಶ್ಲೇಷಿಸಲಾದ ಎಲ್ಲಾ 132 ಶಾಸಕರ ಒಟ್ಟು ಆಸ್ತಿ ಮೌಲ್ಯ 363.78 ಕೋಟಿ ರೂಪಾಯಿಗಳಾಗಿದ್ದು, ಪ್ರತಿ ಶಾಸಕರ ಸರಾಸರಿ ಆಸ್ತಿ 2.75 ಕೋಟಿ ರೂಪಾಯಿಗಳಾಗಿದೆ. ಕಾಂಗ್ರೆಸ್ ಶಾಸಕ ಮ್ಯಾಥ್ಯೂ ಕುಜಲ್ನಾಡನ್ 34 ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿಯೊಂದಿಗೆ ರಾಜ್ಯದ ಅತ್ಯಂತ ಶ್ರೀಮಂತ ಶಾಸಕರಾಗಿ ಹೊರಹೊಮ್ಮಿದ್ದಾರೆ. ನಂತರದ ಸ್ಥಾನಗಳಲ್ಲಿ ಪಕ್ಷೇತರ ಶಾಸಕ ಮಣಿ ಸಿ. ಕಾಪ್ಪನ್ (27 ಕೋಟಿ ರೂ.) ಮತ್ತು ಗಣೇಶ್ ಕುಮಾರ್ (19 ಕೋಟಿ ರೂ.) ಇದ್ದಾರೆ. ಕೇವಲ 9.9 ಲಕ್ಷ ರೂಪಾಯಿ ಆಸ್ತಿ ಹೊಂದಿರುವ ಸಿಪಿಎಂ ಶಾಸಕ ಪಿ.ಪಿ. ಸುಮೋದ್ ಅತ್ಯಂತ ಕಡಿಮೆ ಆಸ್ತಿ ಹೊಂದಿದ ಜನಪ್ರತಿನಿಧಿಯಾಗಿದ್ದಾರೆ.
ಶಿಕ್ಷಣ ಮತ್ತು ಲಿಂಗ ಸಮಾನತೆ
ಶಾಸಕರ ಶೈಕ್ಷಣಿಕ ಅರ್ಹತೆಯನ್ನು ನೋಡಿದರೆ, ಶೇ.61ರಷ್ಟು ಮಂದಿ ಪದವೀಧರರು ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದವರಾಗಿದ್ದಾರೆ. ಇನ್ನು ವಯೋಮಾನದ ವಿಷಯದಲ್ಲಿ ಶೇ.70ರಷ್ಟು ಶಾಸಕರು 51 ರಿಂದ 80 ವರ್ಷ ವಯಸ್ಸಿನವರಾಗಿದ್ದಾರೆ. ಆದರೆ, ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ಕೇರಳ ವಿಧಾನಸಭೆ ಹಿನ್ನಡೆ ಅನುಭವಿಸಿದೆ. ಒಟ್ಟು ಶಾಸಕರಲ್ಲಿ ಕೇವಲ 11 ಮಂದಿ (ಶೇ.8) ಮಾತ್ರ ಮಹಿಳೆಯರಿದ್ದಾರೆ ಎಂಬುದು ಗಮನಾರ್ಹ ಸಂಗತಿ.
ಇದನ್ನೂ ಓದಿ : ಜಗದ್ಗುರು ಶಿವಾನಂದ ಮಠದ ಸ್ವಾಮೀಜಿ ನೇಣು ಬಿಗಿದು ಆತ್ಮಹತ್ಯೆ.. ಕಾರಣ ನಿಗೂಢ!



















