ಹೊಶಿಯಾರ್‌ಪುರ: ಪಂಜಾಬ್‌ನ ಹೊಶಿಯಾರ್‌ಪುರ-ಜಲಂಧರ್ ರಸ್ತೆಯ ಮಂಡಿಯಾಲ ಅಡ್ಡಾ ಬಳಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿ, 15 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪಿಕ್-ಅಪ್ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಎಲ್‌ಪಿಜಿ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ.
ಮೃತರನ್ನು ಚಾಲಕ ಸುಖ್‌ಜೀತ್ ಸಿಂಗ್, ಬಲವಂತ್ ರಾಯ್, ಧರ್ಮೇಂದ್ರ ವರ್ಮಾ, ಮನ್‌ಜೀತ್ ಸಿಂಗ್, ವಿಜಯ್, ಜಸ್ವಿಂದರ್ ಕೌರ್, ಮತ್ತು ಆರಾಧನಾ ವರ್ಮಾ ಎಂದು ಗುರುತಿಸಲಾಗಿದೆ. 28 ವರ್ಷದ ಆರಾಧನಾ ವರ್ಮಾ ಅವರು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದು, ಅಮೃತಸರದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಸಿವಿಲ್ ಸರ್ಜನ್ ಡಾ. ಪವನ್ ಕುಮಾರ್ ತಿಳಿಸಿದ್ದಾರೆ.

ಹೊಶಿಯಾರ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ತನಿಖೆ) ಮುಕೇಶ್ ಕುಮಾರ್ ಅವರು ಸಾವು-ನೋವುಗಳನ್ನು ಖಚಿತಪಡಿಸಿದ್ದಾರೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 (ಕೊಲೆಯಲ್ಲದ ಅಪರಾಧಿಕ ನರಹತ್ಯೆ) ಮತ್ತು 324(4) (ಆಸ್ತಿಗೆ ಹಾನಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬುಲ್ಲೋವಾಲ್ ಪೊಲೀಸ್ ಠಾಣೆಯ ಎಸ್‌ಐ ಮನಿಂದರ್ ಸಿಂಗ್ ಹೇಳಿದ್ದಾರೆ.
ಕಣ್ಣೆದುರೇ ನಡೆದ ಭಯಾನಕ ಕ್ಷಣ
ದುರಂತದ ಭಯಾನಕ ಕ್ಷಣಗಳನ್ನು ನೆನೆದ ಮಂಡಿಯಾಲ ನಿವಾಸಿ ಗುರುಮುಖ್ ಸಿಂಗ್ (56), “ನಾನು ಸ್ನಾನ ಮಾಡುತ್ತಿದ್ದೆ, ಆಗ ದೊಡ್ಡ ಸ್ಫೋಟದ ಶಬ್ದ ಕೇಳಿಸಿತು. ಇದ್ದಕ್ಕಿದ್ದಂತೆ, ಬೆಂಕಿಯ ಜ್ವಾಲೆಗಳು ನಮ್ಮನ್ನು ಸುತ್ತುವರಿದವು. ನನ್ನ ಪತ್ನಿ, ಮಗಳು ಮತ್ತು ಸೊಸೆಗೆ ಸುಟ್ಟಗಾಯಗಳಾಗಿವೆ. ಹೇಗೋ ಕಂಬಳಿಯಲ್ಲಿ ಸುತ್ತಿ ನನ್ನ ಮೊಮ್ಮಗನನ್ನು ಉಳಿಸಿದೆ,” ಎಂದು ಹೇಳಿದ್ದಾರೆ. ಪೊಲೀಸರ ಪ್ರಕಾರ, ರಾಮ ನಗರ್ ಧೇಹಾ ಲಿಂಕ್ ರಸ್ತೆಗೆ ಟ್ಯಾಂಕರ್ ತಿರುಗುತ್ತಿದ್ದಾಗ ಪಿಕ್-ಅಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಮಾರಣಾಂತಿಕ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ್ದು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರು ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿ ಮಂಡಿಯಾಲ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಮೂರು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆ ತಡೆದು ಧರಣಿ ನಡೆಸಿದ್ದಾರೆ. ಸೂಕ್ತ ಪರಿಹಾರ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಉಪವಿಭಾಗಾಧಿಕಾರಿ ಗುರ್ಸಿಮ್ರನ್‌ಜೀತ್ ಕೌರ್ ಅವರು ಪರಿಹಾರ ಮತ್ತು ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.
ಸಚಿವ ಡಾ. ರವ್ಜೋತ್ ಸಿಂಗ್, ಶಾಸಕ ಬ್ರಹ್ಮ ಶಂಕರ್ ಜಿಂಪಾ, ಸಂಸದ ರಾಜ್ ಕುಮಾರ್ ಚಬ್ಬೆವಾಲ್ ಸೇರಿದಂತೆ ಹಲವು ನಾಯಕರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರ್ರಿಂಗ್ ಅವರು, ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಮತ್ತು ಮೃತರ ಕುಟುಂಬಗಳಿಗೆ ಕನಿಷ್ಠ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.



















