ನವದೆಹಲಿ: ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ 2026ರ ಕೇಂದ್ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸುವ 7 ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದ್ದಾರೆ. ವಿಶೇಷವೆಂದರೆ ಅದರಲ್ಲಿ ಬೆಂಗಳೂರು ಕೂಡ ಸೇರಿದೆ.
ಯೋಜನೆಯಡಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಎರಡು ಪ್ರಮುಖ ಮಾರ್ಗಗಳ ಸಂಪರ್ಕ ಸಿಗಲಿದೆ: ಹೈದರಾಬಾದ್ – ಬೆಂಗಳೂರು ಮತ್ತು ಚೆನ್ನೈ – ಬೆಂಗಳೂರನ್ನು ಸಂಪರ್ಕಿಸುವ ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಲಾಗಿದೆ. ಈ ಮಾರ್ಗಗಳಿಂದಾಗಿ ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಇಳಿಕೆಯಾಗಲಿದ್ದು, ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗಲಿದೆ.
7 ಹೈ-ಸ್ಪೀಡ್ ಕಾರಿಡಾರ್‌ಗಳು ಯಾವುವು?:
ಮುಂಬೈ – ಪುಣೆ
ಹೈದರಾಬಾದ್ – ಬೆಂಗಳೂರು
ದೆಹಲಿ – ವಾರಣಾಸಿ
ವಾರಣಾಸಿ – ಸಿಲಿಗುರಿ
ಪುಣೆ – ಹೈದರಾಬಾದ್
ಹೈದರಾಬಾದ್ – ಚೆನ್ನೈ
ಚೆನ್ನೈ – ಬೆಂಗಳೂರು
ಮೂಲಸೌಕರ್ಯಕ್ಕೆ ಬಂಪರ್ ಅನುದಾನ
ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಸರ್ಕಾರವು 2026-27ನೇ ಹಣಕಾಸು ವರ್ಷಕ್ಕೆ 12.2 ಲಕ್ಷ ಕೋಟಿ ರೂ.ಗಳ ಬಂಡವಾಳ ವೆಚ್ಚವನ್ನು ನಿಗದಿಪಡಿಸಿದೆ. ಇದು ಕಳೆದ ವರ್ಷಕ್ಕಿಂತ (11.2 ಲಕ್ಷ ಕೋಟಿ) ಹೆಚ್ಚಾಗಿದೆ. ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಭರವಸೆ ನೀಡಲು ‘ಮೂಲಸೌಕರ್ಯ ಅಪಾಯ ಖಾತರಿ ನಿಧಿ’ (Infrastructure Risk Guarantee Fund) ಸ್ಥಾಪಿಸುವುದಾಗಿಯೂ ಸಚಿವೆ ನಿರ್ಮಲಾ ಘೋಷಿಸಿದ್ದಾರೆ.
ಇತರ ಪ್ರಮುಖ ಮುಖ್ಯಾಂಶಗಳು:
ಸರಕು ಸಾಗಣೆ ಕಾರಿಡಾರ್: ದಾನ್‌ಕುನಿಯಿಂದ ಸೂರತ್‌ವರೆಗೆ ಹೊಸ ‘ಪೂರ್ವ-ಪಶ್ಚಿಮ ಸರಕು ಸಾಗಣೆ ಕಾರಿಡಾರ್’ ನಿರ್ಮಾಣ.
ಜಲಮಾರ್ಗಗಳು: ಮುಂದಿನ 5 ವರ್ಷಗಳಲ್ಲಿ 22 ಹೊಸ ರಾಷ್ಟ್ರೀಯ ಜಲಮಾರ್ಗಗಳ ಕಾರ್ಯಾಚರಣೆ.
ನಗರ ಅಭಿವೃದ್ಧಿ: ಎರಡನೇ ಮತ್ತು ಮೂರನೇ ಹಂತದ ನಗರಗಳ (Tier 2 & 3) ಅಭಿವೃದ್ಧಿಗಾಗಿ ವಾರ್ಷಿಕ 5,000 ಕೋಟಿ ರೂ. ಅನುದಾನ.
ಪರಿಸರ ಸ್ನೇಹಿ ಪ್ರಯಾಣ ಮತ್ತು ವೇಗದ ಸಂಪರ್ಕದ ಮೂಲಕ ಭಾರತವನ್ನು ಜಾಗತಿಕ ಮಟ್ಟದ ಸಾರಿಗೆ ವ್ಯವಸ್ಥೆಗೆ ಸಜ್ಜುಗೊಳಿಸುವುದು ಈ ಬಜೆಟ್‌ನ ಪ್ರಮುಖ ಗುರಿಯಾಗಿದೆ.
ಇದನ್ನೂ ಓದಿ : Union Budget 2026 | ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸಿಹಿ ಸುದ್ದಿ : 2026-27ರಲ್ಲಿ 1.4 ಲಕ್ಷ ಕೋಟಿ ರೂ. ಹಂಚಿಕೆ



















