ಜಮ್ಮು: ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೊಂದು ದುರಂತ ಅಪ್ಪಳಿಸಿದೆ. ಚಸೋಟಿ ಗ್ರಾಮದಲ್ಲಿ ದಿಢೀರ್ ಪ್ರವಾಹವು ಹಲವು ಜೀವಗಳನ್ನು ಬಲಿಪಡೆದ ಬಳಿಕ ಇದೀಗ ಕಥುವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹಕ್ಕೆ ಕನಿಷ್ಠ 7 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಜಂಗ್ಲೋಟೆ ಗ್ರಾಮದಲ್ಲಿ ಶನಿವಾರ ಮತ್ತು ಭಾನುವಾರದ ನಡುವಿನ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಮೇಘಸ್ಫೋಟದಿಂದಾಗಿ ಹಳ್ಳಿಯಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ. ವಾಹನಗಳು, ಮನೆಗಳು, ಜಾನುವಾರುಗಳು ಕೊಚ್ಚಿಹೋಗಿವೆ.
ಈ ಅನಾಹುತದಿಂದಾಗಿ ರೈಲ್ವೆ ಹಳಿ, ರಾಷ್ಟ್ರೀಯ ಹೆದ್ದಾರಿ-44 ಮತ್ತು ಪೊಲೀಸ್ ಠಾಣೆಗೆ ಹಾನಿಯಾಗಿದೆ ಎಂದು ಕೇಂದ್ರ ಸಚಿವ ಹಾಗೂ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಕ್ಷೇತ್ರದ ಸಂಸದರಾದ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಕಥುವಾದ ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿದ ಅವರು ನಂತರ, “ನಾಗರಿಕ ಆಡಳಿತ, ಸೇನೆ ಮತ್ತು ಅರೆಸೇನಾ ಪಡೆಗಳು ಕಾರ್ಯಪ್ರವೃತ್ತವಾಗಿವೆ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಈ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೇಘಸ್ಫೋಟ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಕಥುವಾ ಜಿಲ್ಲೆಯಲ್ಲಿ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪರಿಹಾರ, ರಕ್ಷಣೆ ಮತ್ತು ಸ್ಥಳಾಂತರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
“ಜೋಧ್ ಖಾದ್ ಮತ್ತು ಜುಥಾನಾ ಸೇರಿದಂತೆ ಕಥುವಾದ ಹಲವು ಭಾಗಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ 7 ಮಂದಿ ಪ್ರಾಣ ಕಳೆದುಕೊಂಡು, ಹಲವರು ಗಾಯಗೊಂಡಿರುವ ಘಟನೆಗೆ ಮುಖ್ಯಮಂತ್ರಿಗಳು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ ಮತ್ತು ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ” ಎಂದು ಮುಖ್ಯಮಂತ್ರಿಗಳ ಕಚೇರಿ ‘ಎಕ್ಸ್’ ನಲ್ಲಿ ತಿಳಿಸಿದೆ.

ಭಾರೀ ಮಳೆಯ ಮುನ್ನೆಚ್ಚರಿಕೆ
ಮೇಘಸ್ಫೋಟದ ನಂತರ ಕಥುವಾ ಜಿಲ್ಲಾಡಳಿತವು ಹವಾಮಾನ ಸಲಹೆಯನ್ನು ನೀಡಿದ್ದು, ಜಿಲ್ಲೆಯಾದ್ಯಂತ “ಭಾರೀ ಯಿಂದ ಅತಿ ಭಾರೀ ಮಳೆ” ವರದಿಯಾಗಿದೆ ಎಂದು ತಿಳಿಸಿದೆ. ಸಾರ್ವಜನಿಕರು ಜಲಮೂಲಗಳಿಂದ ದೂರವಿರಲು ವಿನಂತಿಸಿದೆ. “ಭಾರೀ ಮಳೆಯಿಂದಾಗಿ ನೀರಿನ ಮಟ್ಟವು ವೇಗವಾಗಿ ಏರಿಕೆಯಾಗಬಹುದು, ಇದರಿಂದಾಗಿ ಹಠಾತ್ ಪ್ರವಾಹ ಮತ್ತು ಭೂಕುಸಿತದ ಅಪಾಯ ಹೆಚ್ಚಿರುವುದರಿಂದ ನದಿಗಳು, ತೊರೆಗಳು ಮತ್ತು ಇತರ ಜಲಮೂಲಗಳ ಬಳಿ ಹೋಗುವುದನ್ನು ಹಾಗೂ ಗುಡ್ಡಗಾಡು ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಗೆ ತೆರಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ” ಎಂದು ಕಥುವಾ ಜಿಲ್ಲಾ ಮಾಹಿತಿ ಕೇಂದ್ರ ಎಚ್ಚರಿಸಿದೆ. ಭಾರೀ ಮಳೆಯಿಂದಾಗಿ ಹೆಚ್ಚಿನ ಜಲಮೂಲಗಳ ಮಟ್ಟದಲ್ಲಿ ತೀವ್ರ ಏರಿಕೆಯಾಗಿದ್ದು, ಉಜ್ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಶ್ತ್ವಾರ್ ದುರಂತದ ನೆನಪು
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ 50ಕ್ಕೂ ಹೆಚ್ಚು ಜನರು ಸಾವಿಗೀಡಾಗಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆಗಸ್ಟ್ 14ರಂದು ಮಚೈಲ್ ಮಾತಾ ವಾರ್ಷಿಕ ಯಾತ್ರೆಗಾಗಿ ಚಸೋಟಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದಾಗ ಈ ದುರಂತ ಸಂಭವಿಸಿತ್ತು. ಈ ಘಟನೆಯಲ್ಲಿ 82ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.



















