ಇತ್ತೀಚೆಗಷ್ಟೇ ಪದವಿ ಮುಗಿಸಿ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದೀರಾ? ಒಂದೊಳ್ಳೆ ಜಾಬ್ ಗಾಗಿ ಎಲ್ಲ ಕಡೆ ಅರ್ಜಿ ಸಲ್ಲಿಸಿ ಸುಸ್ತಾಗಿದ್ದೀರಾ? ಎಲ್ಲೆಲ್ಲಿ ವೆಕೆನ್ಸಿ ಇದೆ ಎಂದು ಹುಡುಕುತ್ತಿದ್ದೀರಾ? ಇನ್ನು ಚಿಂತೆ ಬೇಡ. ಎರಡು ಪ್ರಮುಖ ಬ್ಯಾಂಕ್ ಗಳು 662 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿವೆ. ಪದವಿ ಮುಗಿಸಿದವರು ಕೂಡಲೇ ಅರ್ಜಿ ಸಲ್ಲಿಸಿ, ಒಳ್ಳೆಯ ಉದ್ಯೋಗ ಪಡೆದುಕೊಳ್ಳಲು ಇದು ನಿಮಗೆ ಸಕಾಲ…..
ಹೌದು, ದೇಶದ ಬೃಹತ್ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್ ಬಿಐ ನಲ್ಲಿ 600 ಪ್ರೊಬೇಷನರಿ ಆಫೀಸರ್ ಪೋಸ್ಟ್ಗಳನ್ನು ಭರ್ತಿ ಮಾಡಲು ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದು ಆಯ್ಕೆ ಆದವರು ಭಾರತದ ಯಾವುದೇ ಶಾಖೆಯಲ್ಲಿ ಕರ್ತವ್ಯ ಮಾಡಲು ಸಿದ್ಧರಿರಬೇಕು. ಸರ್ಕಾರಿ ಉದ್ಯೋಗದ ಅನ್ವಯದಂತೆಯೇ ಎಲ್ಲ ಸೌಲಭ್ಯವನ್ನು ಈ ಹುದ್ದೆಗೆ ಸೇರುವವರಿಗೆ ನೀಡಲಾಗುತ್ತದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರು ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಕಳೆದ ಡಿಸೆಂಬರ್ 27ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 16 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಎಸ್ ಬಿಐ ಬ್ಯಾಂಕ್ ನಲ್ಲಿ ಒಟ್ಟು 600 ಪಿಒ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಐ ಪೈಕಿ ಎಸ್ಸಿ -87, ಎಸ್ಟಿ – 57, ಒಬಿಸಿ-158, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ – 58 ಹಾಗೂ ಜನರಲ್ ಕೆಟಗರಿ ಅಭ್ಯರ್ಥಿಗಳಿಗೆ- 240 ಹುದ್ದೆಗಳು ಮೀಸಲಿವೆ. ದಿನಾಂಕ 01-04-2024ಕ್ಕೆ ಕನಿಷ್ಠ 21 ವರ್ಷ ಆಗಿರುವ, ಗರಿಷ್ಠ 30 ವರ್ಷ ವಯಸ್ಸು ಮೀರದವರು ಅರ್ಜಿ ಸಲ್ಲಿಸಬಹುದಾಗಿದೆ. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ. ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆಯ ನಿಯಮವಿದೆ.
ಡೇಟಾ ಎಂಜಿನಿಯರ್, ಡೇಟಾ ಸೈಂಟಿಸ್ಟ್, ಎಸ್ ಇಒ ಸ್ಪೆಷಲಿಸ್ಟ್ ಸೇರಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 62 ಹುದ್ದೆಗಳು ಖಾಲಿ ಇವೆ. ಇದಕ್ಕಾಗಿ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಬಿಎ, ಬಿಇ, ಬಿ.ಟೆಕ್, ಬಿಎಸ್ಸಿ, ಎಂಸಿಎ ಸೇರಿ ವಿವಿಧ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಜಿ ಹಾಕಿದವರಿಗೆ ಐಬಿಪಿಎಸ್ ಮಾದರಿಯ ಎಸ್ಒ ಪರೀಕ್ಷೆ ಇರುತ್ತದೆ. ನಂತರ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಡಿಸೆಂಬರ್ 27ರಿಂದಲೇ ಸ್ಪೆಷಲಿಸ್ಟ್ ಆಫೀಸರ್ ಗಳ ನೇಮಕಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 22 ವರ್ಷ ಕನಿಷ್ಠ ವಯಸ್ಸಾಗಿರಬೇಕು ಹಾಗೂ 38 ವರ್ಷ ಮೀರಿರಬಾರದು. ಸಾಮಾನ್ಯ ವರ್ಗದವರಿಗೆ 750 ರೂ., ಇಡಬ್ಲ್ಯೂಎಸ್ ಹಾಗೂ ಒಬಿಸಿಗಳಿಗೆ 750 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್ ಸಿ, ಎಸ್ ಟಿ ಹಾಗೂ ವಿಶೇಷ ಚೇತನರಿಗೆ ವಿನಾಯಿತಿ ನೀಡಲಾಗಿದೆ.