ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಉದ್ಯಮಿ ದೀಪಕ್ ಕೊಠಾರಿ ಎಂಬವರು 60 ಕೋಟಿ ರೂ. ವಂಚನೆ ಆರೋಪ ಹೊರಿಸಿದ್ದು, ಅದರ ಆಧಾರದಲ್ಲಿ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಎಫ್ಐಆರ್ ದಾಖಲಿಸಿದೆ. ಆದರೆ, ಈ ಆರೋಪಗಳನ್ನು “ಆಧಾರರಹಿತ ಮತ್ತು ದುರುದ್ದೇಶಪೂರಿತ” ಎಂದು ದಂಪತಿ ತಳ್ಳಿಹಾಕಿದ್ದಾರೆ.
ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ ನಿರ್ದೇಶಕರಾದ ದೀಪಕ್ ಕೊಠಾರಿ ಅವರ ಪ್ರಕಾರ, 2015ರಲ್ಲಿ ಶಿಲ್ಪಾ ಮತ್ತು ರಾಜ್ ಕುಂದ್ರಾ ತಮ್ಮ ‘ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್’ ಎಂಬ ಶಾಪಿಂಗ್ ಟಿವಿ ಚಾನೆಲ್ ವಿಸ್ತರಣೆಗಾಗಿ ಹಣ ಕೇಳಿದ್ದರು. ಆರಂಭದಲ್ಲಿ ಶೇ.12 ಬಡ್ಡಿ ದರದಲ್ಲಿ 75 ಕೋಟಿ ರೂ. ಸಾಲ ಕೇಳಿದ್ದ ದಂಪತಿ, ನಂತರ ಅದನ್ನು “ಹೂಡಿಕೆ” ಎಂದು ಬದಲಾಯಿಸಿ, ಮಾಸಿಕ ಆದಾಯ ಮತ್ತು ಮೂಲಧನ ಮರುಪಾವತಿಯ ಭರವಸೆ ನೀಡಿದ್ದರು ಎಂದು ಕೊಠಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಒಪ್ಪಂದದ ಅಡಿಯಲ್ಲಿ, ಕೊಠಾರಿ ಅವರು ಏಪ್ರಿಲ್ 2015ರಲ್ಲಿ 31.95 ಕೋಟಿ ರೂ. ಮತ್ತು ಸೆಪ್ಟೆಂಬರ್ 2015ರಲ್ಲಿ 28.53 ಕೋಟಿ ರೂ.ಗಳನ್ನು ಬೆಸ್ಟ್ ಡೀಲ್ ಟಿವಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಆದರೆ, ಈ ಹಣವನ್ನು ದಂಪತಿ ತಮ್ಮ ವ್ಯವಹಾರಕ್ಕೆ ಬಳಸದೆ, ವೈಯಕ್ತಿಕ ಖರ್ಚುಗಳಿಗೆ “ಅಪ್ರಾಮಾಣಿಕವಾಗಿ” ಬಳಸಿಕೊಂಡಿದ್ದಾರೆ. ಹಣವನ್ನು ಮರಳಿ ಪಡೆಯಲು ಮಾಡಿದ ಪ್ರಯತ್ನಗಳು ವಿಫಲವಾದ ಕಾರಣ, ದೂರು ದಾಖಲಿಸಿದ್ದಾಗಿ ಕೊಠಾರಿ ತಿಳಿಸಿದ್ದಾರೆ.
ಶಿಲ್ಪಾ ಮತ್ತು ರಾಜ್ ಕುಂದ್ರಾ ಪರ ವಕೀಲರ ಸ್ಪಷ್ಟನೆ
ದಂಪತಿಯ ಪರ ವಕೀಲರಾದ ಪ್ರಶಾಂತ್ ಪಾಟೀಲ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ಈ ಪ್ರಕರಣವು ಸಂಪೂರ್ಣವಾಗಿ ಸಿವಿಲ್ ಸ್ವರೂಪದ್ದಾಗಿದ್ದು, ಇದರಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣವಿಲ್ಲ. ಇದು ಹಳೆಯ ವ್ಯವಹಾರವಾಗಿದ್ದು, ಕಂಪನಿಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ಕುರಿತು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಮುಂಬೈನಲ್ಲಿ ಅಕ್ಟೋಬರ್ 4, 2024ರಂದು ಈಗಾಗಲೇ ತೀರ್ಪು ನೀಡಿದೆ” ಎಂದು ಅವರು ಹೇಳಿದ್ದಾರೆ.
“ನಮ್ಮ ಲೆಕ್ಕಪರಿಶೋಧಕರು ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳನ್ನು ಕಳೆದ ಒಂದು ವರ್ಷದಲ್ಲಿ 15ಕ್ಕೂ ಹೆಚ್ಚು ಬಾರಿ ಭೇಟಿಯಾಗಿ, ಹಣದ ಹರಿವಿನ ವಿವರ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಒದಗಿಸಿದ್ದಾರೆ. ಕಂಪನಿಯನ್ನು ಮುಚ್ಚುವಂತೆ ಆದೇಶಿಸಲಾಗಿದ್ದು, ಅದರ ಪ್ರತಿಯನ್ನು ಪೊಲೀಸರಿಗೂ ನೀಡಲಾಗಿದೆ. ನಮ್ಮ ಕಕ್ಷಿದಾರರ ವರ್ಚಸ್ಸಿಗೆ ಧಕ್ಕೆ ತರಲು ಈ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಮತ್ತು ಇದರ ವಿರುದ್ಧ ನಾವು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ,” ಎಂದು ವಕೀಲರು ತಿಳಿಸಿದ್ದಾರೆ.
ಈ ಹಿಂದೆ ಕೂಡ ರಾಜ್ ಕುಂದ್ರಾ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆಯನ್ನು ಎದುರಿಸಿದ್ದರು. 2021ರಲ್ಲಿ, ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು, ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.



















