ಬೆಂಗಳೂರು: ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕೆಲವು ಸಮಯದಿಂದ ಮೌನವಾಗಿದ್ದ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು, 2026 ರಿಂದ ಭರ್ಜರಿ ಪುನರಾಗಮನ ಮಾಡಲು ಸಜ್ಜಾಗಿವೆ. ಹೊಸ ಕಾರ್ಯತಂತ್ರದ ಭಾಗವಾಗಿ, ಈ ಎರಡೂ ಬ್ರ್ಯಾಂಡ್‌ಗಳು ಮುಂದಿನ ಎರಡು ವರ್ಷಗಳಲ್ಲಿ ಒಟ್ಟು 6 ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿವೆ. ಇದರಲ್ಲಿ ಎಸ್‌ಯುವಿ, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳು ಸೇರಿದ್ದು, ಗ್ರಾಹಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

- ರೆನಾಲ್ಟ್ ಡಸ್ಟರ್ (Renault Duster)
ಭಾರತದಲ್ಲಿ ಒಂದು ಕಾಲದಲ್ಲಿ ಎಸ್‌ಯುವಿ ಮಾರುಕಟ್ಟೆಯ ದಿಕ್ಕನ್ನೇ ಬದಲಿಸಿದ್ದ ‘ಡಸ್ಟರ್’ ಹೊಚ್ಚ ಹೊಸ ರೂಪದಲ್ಲಿ ಮತ್ತೆ ಬರಲಿದೆ. 2026ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಈ ಹೊಸ ತಲೆಮಾರಿನ ಡಸ್ಟರ್, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿದೆ. ಸಂಪೂರ್ಣ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಬರಲಿರುವ ಈ ಎಸ್‌ಯುವಿ, ಲೆವೆಲ್ 2 ADAS (Advanced Driver-Assistance Systems) ನಂತಹ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿರುವುದು ವಿಶೇಷ. - ರೆನಾಲ್ಟ್ ಬಿಗ್‌ಸ್ಟರ್ (Renault Bigster)
ಡಸ್ಟರ್‌ನ ಯಶಸ್ಸಿನ ಬೆನ್ನಲ್ಲೇ, ರೆನಾಲ್ಟ್ ತನ್ನ ಮುಂದಿನ ದೊಡ್ಡ ಯೋಜನೆಯಾದ ‘ಬಿಗ್‌ಸ್ಟರ್’ ಅನ್ನು ಪರಿಚಯಿಸಲಿದೆ. ಇದು ಡಸ್ಟರ್‌ನ 7-ಸೀಟರ್ ಆವೃತ್ತಿಯಾಗಿದ್ದು, ಅದೇ ಪ್ಲಾಟ್‌ಫಾರ್ಮ್ ಮೇಲೆ ನಿರ್ಮಾಣವಾಗಲಿದೆ. ಮೂರನೇ ಸಾಲಿನ ಸೀಟ್‌ಗಳನ್ನು ಅಳವಡಿಸಲು ಇದನ್ನು ಸ್ವಲ್ಪ ದೊಡ್ಡದಾಗಿ ವಿನ್ಯಾಸಗೊಳಿಸಲಾಗುವುದು. ಡಸ್ಟರ್‌ನಲ್ಲೇ ಇರುವ ಪೆಟ್ರೋಲ್ ಎಂಜಿನ್ ಅನ್ನು ಇದರಲ್ಲಿಯೂ ಬಳಸುವ ಸಾಧ್ಯತೆ ಇದೆ. - ರೆನಾಲ್ಟ್ ಕ್ವಿಡ್ ಇವಿ (Renault Kwid EV)
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೆನಾಲ್ಟ್ ತನ್ನ ಜನಪ್ರಿಯ ‘ಕ್ವಿಡ್’ ಮಾದರಿಯ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ‘ಡೇಸಿಯಾ ಸ್ಪ್ರಿಂಗ್ ಇವಿ’ (Dacia Spring EV) ಹೆಸರಿನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಈ ಕಾರನ್ನೇ ಭಾರತದಲ್ಲಿ ‘ಕ್ವಿಡ್ ಇವಿ’ ಆಗಿ ತರಲಾಗುತ್ತಿದೆ. ಇದು 24.3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಸುಮಾರು 225 ಕಿಲೋಮೀಟರ್ ಮೈಲೇಜ್ ನೀಡುವ ನಿರೀಕ್ಷೆಯಿದೆ. ಕಡಿಮೆ ಬೆಲೆಯ ಆವೃತ್ತಿಯಲ್ಲಿ ಕಡಿಮೆ ಸಾಮರ್ಥ್ಯದ ಮೋಟಾರ್ ಮತ್ತು ದುಬಾರಿ ಆವೃತ್ತಿಯಲ್ಲಿ 100 bhp ಶಕ್ತಿಯ ಮೋಟಾರ್ ನೀಡುವ ಸಾಧ್ಯತೆಯಿದೆ. - ನಿಸ್ಸಾನ್ ಎಂಪಿವಿ (Nissan MPV)
ರೆನಾಲ್ಟ್-ನಿಸ್ಸಾನ್ ಪಾಲುದಾರಿಕೆಯ ಭಾಗವಾಗಿ, ರೆನಾಲ್ಟ್‌ನ ಯಶಸ್ವಿ ‘ಟ್ರೈಬರ್’ ಎಂಪಿವಿಯ ಮರುಬ್ಯಾಡ್ಜ್ (rebadged) ಆವೃತ್ತಿಯನ್ನು ನಿಸ್ಸಾನ್ ಬಿಡುಗಡೆ ಮಾಡಲಿದೆ. ಭಾರತದ ಅತ್ಯಂತ ಕಡಿಮೆ ಬೆಲೆಯ 7-ಸೀಟರ್ ಕಾರು ಎಂಬ ಹೆಗ್ಗಳಿಕೆ ಹೊಂದಿರುವ ಟ್ರೈಬರ್‌ನ ಬಹುತೇಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಇದು ಹೊಂದಿರಲಿದೆ. ನಿಸ್ಸಾನ್‌ನ ವಿಶಿಷ್ಟ ವಿನ್ಯಾಸದೊಂದಿಗೆ ಬರಲಿರುವ ಈ ಕಾರು, 1.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು ಮ್ಯಾನುವಲ್ ಹಾಗೂ AMT ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿರುತ್ತದೆ. - ನಿಸ್ಸಾನ್ ಟೆಕ್ಟಾನ್ (Nissan Tekton)
ಹ್ಯುಂಡೈ ಕ್ರೆಟಾದಂತಹ ಜನಪ್ರಿಯ ಕಾರುಗಳಿಗೆ ಸ್ಪರ್ಧೆ ನೀಡಲು, ನಿಸ್ಸಾನ್ ತನ್ನ ಹೊಚ್ಚ ಹೊಸ ‘ಟೆಕ್ಟಾನ್’ ಎಸ್‌ಯುವಿಯನ್ನು ಪರಿಚಯಿಸಲಿದೆ. ಇದು ರೆನಾಲ್ಟ್ ಡಸ್ಟರ್‌ನ ಪ್ಲಾಟ್‌ಫಾರ್ಮ್ ಆಧಾರಿತವಾಗಿದ್ದರೂ, ನಿಸ್ಸಾನ್‌ನ ಪ್ರಮುಖ ಎಸ್‌ಯುವಿ ‘ಪೆಟ್ರೋಲ್’ ನಿಂದ ಸ್ಫೂರ್ತಿ ಪಡೆದ ವಿನ್ಯಾಸವನ್ನು ಹೊಂದಿರುತ್ತದೆ. 2026ರ ಮಧ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವ ಈ ಕಾರು, ಡಸ್ಟರ್‌ನಲ್ಲೇ ಇರುವ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರಲಿದೆ. - ನಿಸ್ಸಾನ್ ಟೆಕ್ಟಾನ್ 7-ಸೀಟರ್ (Nissan Tekton 7-Seater)
ರೆನಾಲ್ಟ್‌ನಂತೆ ನಿಸ್ಸಾನ್ ಕೂಡ ತನ್ನ ‘ಟೆಕ್ಟಾನ್’ ಎಸ್‌ಯುವಿಯ 7-ಸೀಟರ್ ಆವೃತ್ತಿಯನ್ನು ಮಾರುಕಟ್ಟೆಗೆ ತರಲಿದೆ. 5-ಸೀಟರ್ ಆವೃತ್ತಿಗಿಂತ ಕೆಲವು ವಿನ್ಯಾಸ ಬದಲಾವಣೆಗಳು ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಇದು ಹೊಂದಿರಲಿದೆ. 5-ಸೀಟರ್ ಟೆಕ್ಟಾನ್ ಬಿಡುಗಡೆಯಾದ ನಂತರ ಈ ಕಾರು ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯಿದೆ