ಮೈಸೂರು : ಮನೆಯ ಹೊಸ್ತಿಲಲ್ಲಿಇಟ್ಟಿದ್ದ ದಾಸವಾಳ ಹೂ ನುಂಗಿ ಮಗುವೊಂದು ಸಾವನ್ನಪ್ಪಿರುವ ದುರಂತ ಘಟನೆ ಮೈಸೂರಿನ ಹುಣಸೂರು ತಾಲೂಕು ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುದರ್ಶನ್, ನವ್ಯ ದಂಪತಿಯ ಪುತ್ರ ಆರೂವರೆ ತಿಂಗಳ ಚಿನ್ಮಯ್ ಗೌಡ ಮೃತ ದುರ್ದೈವಿ. ಮೊನ್ನೆ ಮನೆಯ ಹೊಸಲಿಗೆ ಪೂಜೆ ಮಾಡಿ ದಾಸವಾಳದ ಹೂವುಗಳನ್ನು ಇಡಲಾಗಿತ್ತು. ಮಗು ಚಿನ್ಮಯ್ ತನ್ನ ಅಣ್ಣನ ಜೊತೆ ಆಟವಾಡುತ್ತಿದ್ದ. ಈ ವೇಳೆ ಪೂಜೆಗಾಗಿ ಇಟ್ಟಿದ್ದ ದಾಸವಾಳ ಹೂವಿನ ಹಸಿರು ದಿಂಡಿನ ಭಾಗವನ್ನು ಕಿತ್ತು ಬಾಯಿಗೆ ಹಾಕಿಕೊಂಡಿದ್ದಾನೆ. ಇದನ್ನು ಗಮನಿಸಿದ ಮಗುವಿನ ಅಣ್ಣ ಹೂ ಹೊರತೆಗೆಯಲು ಪ್ರಯತ್ನಿಸಿದ್ದಾನಾದರೂ, ಅಷ್ಟರಲ್ಲೇ ಮಗು ಆ ದಿಂಡನ್ನು ನುಂಗಿಬಿಟ್ಟಿದೆ.
ಮಗು ನುಂಗಿದ ಹೂವಿನ ಭಾಗವು ನೇರವಾಗಿ ಶ್ವಾಸಕೋಶಕ್ಕೆ ಹೋಗಿ ಸಿಲುಕಿಕೊಂಡಿದೆ. ಇದರಿಂದಾಗಿ ಮಗುವಿಗೆ ತೀವ್ರವಾದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಗಾಬರಿಗೊಂಡ ಪೋಷಕರು ಮಗುವನ್ನ ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.
ಇದನ್ನೂ ಓದಿ : ಇರಾನ್ ಪರಮಾಣು ನಿಕ್ಷೇಪ ವಶಕ್ಕೆ ಅಮೆರಿಕ ಮಾಸ್ಟರ್ ಪ್ಲಾನ್.. ಹಠಕ್ಕೆ ಬಿದ್ದ ಟ್ರಂಪ್!



















