ನೆಲಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದ್ದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ಮಧ್ಯೆ ಈ ಸರಣಿ ಅಪಘಾತ ಸಂಭವಿಸಿದೆ. ಕಾರಿನ ಮೇಲೆ ಲಾರಿ ಮುಗುಚಿ ಬಿದ್ದ ಪರಿಣಾಮ 6 ಜನ ಸಾವನ್ನಪ್ಪಿದ್ದಾರೆ. ಚಂದ್ರಮ್ ಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6)) ಸಾವನ್ನಪ್ಪಿದ್ದಾರೆ. ವೀಕೆಂಡ್ ಪ್ರವಾಸಕ್ಕೆಂದು ಕುಟುಂಬ ಸಮೇತ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಇಂದು ಬೆಳಗ್ಗೆ 11 ಗಂಟೆಯ ವೇಳೆ ಬೆಂಗಳೂರು ತುಮಕೂರು ಎನ್ ಎಚ್ 48 ಹೈವೇ ರಸ್ತೆ ತಿಪ್ಪಗೊಂಡನಹಳ್ಳಿ ಹತ್ತಿರ ಈ ಘಟನೆ ನಡೆದಿದೆ. KA. 06.AB. 0645 ಈಚರ್ ಕ್ಯಾಂಟರ್ ವಾಹನ ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿತ್ತು. ಈ ವೇಳೆ ಕ್ಯಾಂಟರ್ ನ ಹಿಂದೆ ಬರುತ್ತಿದ್ದ KA. 01.ND. 1536 ವೋಲ್ವೋ ಕಾರು ಬರುತ್ತಿತ್ತು. ಈ ಸಂದರ್ಭದಲ್ಲಿ ಲಾರಿಯ ಚಾಲಕ ನಿರ್ಲಕ್ಷ್ಯದಿಂದ ರಸ್ತೆಯ ಎದುರಿನ ಲೈನ್ ನಲ್ಲಿ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆಸಿದ್ದಾನೆ. ನಂತರ ವೋಲ್ವೋ ಕಾರಿನ ಮೇಲೆ ಲಾರಿಯನ್ನು ಪಲ್ಟಿ ಹೊಡೆಸಿದ್ದಾನೆ. ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಪರಿಣಾಮ ಘಟನೆಯಲ್ಲಿ ಕಾರಿನಲ್ಲಿದ್ದ ಕುಟುಂಬಸ್ಥರೆಲ್ಲ ಸಾವನ್ನಪ್ಪಿದ್ದಾರೆ. ಚಂದ್ರಮ್ ಅವರು ಐಎಎಸ್ ಟಿ ಸಲ್ಯೂಷನ್ ಎನ್ನುವ ಸಾಫ್ಟ್‌ವೇರ್ ಕಂಪನಿಯನ್ನು ನಡೆಸುತ್ತಿದ್ದರು. IAST ಸಾಫ್ಟ್ವೇರ್ ಸಲ್ಯೂಷನ್ ನ ಎಂಡಿ, ಸಿಇಒ ಆಗಿ ಚಂದ್ರಮ್ ಕೆಲಸ ಮಾಡುತ್ತಿದ್ದರು.
ಆಟೋಮೋಟಿವ್, ಎಂಬೆಡೆಡ್ ಸಾಫ್ಟ್ವೇರ್ ಡೆವಲ್ಪಮೆಂಟ್ ಕಾರ್ಯವನ್ನು ಕಂಪನಿ ಮಾಡುತ್ತಿತ್ತು. 18 ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಚಂದ್ರಮ್, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರಾಗಿದ್ದರು. ವೀಕೆಂಡ್ ಪ್ರವಾಸಕ್ಕೆಂದು ಕುಟುಂಬದೊಂದಿಗೆ ಅವರು ಹೊರಗೆ ಹೋಗಿದ್ದರು. ಈ ಸುದ್ದಿ ಕೇಳುತ್ತಿದ್ದಂತೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸ್ಥಳಕ್ಕೆ ತೆರಳುತ್ತಿದ್ದಾರೆ. ಹಲವರು ದುಃಖದ ಮಡುವಿನಲ್ಲಿ ಬಿದ್ದಿದ್ದು, ಕಣ್ಣೀರಿಡುತ್ತ ಮನೆಗೆ ಹೋಗಿದ್ದಾರೆ.