ಬೆಳಗಾವಿ: ಉದ್ಘಾಟನೆಗೊಂಡ ಮೂರೇ ತಿಂಗಳಲ್ಲಿ 6.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸೇತುವೆ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಈ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ನಡೆದಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯಿಂದ ಇತ್ತೀಚೆಗೆ ನಿರ್ಮಿಸಲಾದ ಮಾಂಜರಿ-ಬವನಸೌಂದತ್ತಿ ಸೇತುವೆ-ಕಮ್-ಬ್ಯಾರೇಜ್ ಕುಸಿದಿದೆ. ಕಳಪೆ ಗುಣಮಟ್ಟದಿಂದ ಸೇತುವೆ ಕುಸಿದು ಬಿದ್ದಿದೆ ಎಂದು ಆರೋಪಿಸಿ ಸ್ಥಳೀಯರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸೇತುವೆಯನ್ನು ಸ್ಥಳೀಯ ರಾಯಬಾಗ, ಚಿಂಚಲಿ, ಕುಡಚಿ, ದಿಗ್ಗೇವಾಡಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ನಿರ್ಮಿಸಲಾಗಿತ್ತು. ಆದರೆ, ಈಗ ಅದು ಏಕಾಏಕಿ ಕುಸಿದಿದ್ದು, ಜನರು ಸಂಕಷ್ಟ ಅನುಭವಿಸುವಂತಾಗಿದೆ.
ಈ ಸೇತುವೆ ನಿರ್ಮಾಣದಿಂದಾಗಿ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿತ್ತು. ಆದರೆ, ಮೂರೇ ತಿಂಗಳಲ್ಲಿ ಜನರ ಆಸೆ ಕಮರಿದಂತಾಗಿದೆ. ಇದರಿಂದಾಗಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.