ರಾಜ್ಯಾದ್ಯಂತ ಇಂದು ಭಕ್ತ ಕನಕದಾಸರ 538ನೇ ಜಯಂತಿ ಆಚರಿಸಲಾಗುತ್ತಿದೆ. ಸಮಾಜದ ಒಳಿತಿಗಾಗಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಕನಕದಾಸರ ಜಯಂತಿಯನ್ನು ಇಂದು ರಾಜ್ಯದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಾತಿ, ಮತ ಮತ್ತು ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತ, ಸಮಾಜ ಹಾಗೂ ದಾಸಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ ಕೊಡುಗೆ ಕನಕದಾಸರಿಗೆ ಸಲ್ಲುತ್ತದೆ.
ಕನಕದಾಸರ ಇತಿಹಾಸ

ಶಿಗ್ಗಾಂವ್ ತಾಲೂಕಿನ ಬಾಡ ಗ್ರಾಮದಲ್ಲಿ ಬೀರಪ್ಪ-ಬಚ್ಚಮ್ಮ ದಂಪತಿಗೆ ಕ್ರಿ.ಶ 1509 ರಲ್ಲಿ ಕನಕದಾಸರು ಜನಿಸಿದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಇವರು ವಿಜಯನಗರ ಅರಸರ ಆಡಳಿತದಲ್ಲಿ ದಂಡನಾಯಕನಾಗಿದ್ದವರು. ತಿಮ್ಮಪ್ಪನಾಯಕನಿಗೆ ಕನಕ ಸಿಕ್ಕಿದ್ದರಿಂದ ಆತ ಕನಕನಾಗುತ್ತಾನೆ. ನಂತರ ಯುದ್ಧದಲ್ಲಿ ಪಾಲ್ಗೊಂಡು ಅಲ್ಲಿ ಕಂಡ ಹಿಂಸೆಯಿಂದ ಕನಕ ಕನಕದಾಸನಾಗಿದ್ದು ಈಗ ಇತಿಹಾಸ. ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕದಾಸರ ಕರ್ಮಭೂಮಿ. ಕಾಗಿನೆಲೆಯ ಆದಿಕೇಶವನ ಅಂಕಿತನಾಮದಲ್ಲಿ ಕನಕದಾಸರು ಹಲವು ಕೃತಿಗಳನ್ನ ರಚಿಸಿದ್ದಾರೆ. ಸುಮಾರು ಕೀರ್ತನೆಗಳು ಮುಂಡಗಿಗಳನ್ನು ಕನಕದಾಸರು ರಚಿಸಿದ್ದಾರೆ.
ಕನಕದಾಸರು ಮತ್ತು ಉಡುಪಿಯ ಕೃಷ್ಣ ದೇವಾಲಯಕ್ಕಿರುವ ನಂಟು

ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಶ್ರೀ ವ್ಯಾಸರಾಯರ ನೆಚ್ಚಿನ ಶಿಷ್ಯರಾಗಿದ್ದರು. ಅಲ್ಲದೆ ಇವರು ಶ್ರೀ ಕೃಷ್ಣನ ಅನನ್ಯ ಭಕ್ತರೂ ಹೌದು. ಒಂದು ಸಲ ವ್ಯಾಸರಾಯರ ಜೊತೆ ಕನಕದಾಸರು ಉಡುಪಿ ಕೃಷ್ಣ ದೇವಾಲಯಕ್ಕೆ ಆಗಮಿಸಿದ್ದರು. ಆದರೆ ಕೆಳಜಾತಿಯವರು ಎಂಬ ಕಾರಣಕ್ಕೆ ಕನಕದಾಸರಿಗೆ ದೇಗುಲದ ಒಳಗೆ ಪ್ರವೇಶ ಸಿಗಲಿಲ್ಲ. ತನ್ನ ಜಾತಿಯ ಕಾರಣದಿಂದ ಉಡುಪಿ ಶ್ರೀ ಕೃಷ್ಣನ ದೇವಾಲಯಕ್ಕೆ ಕನಕದಾಸರಿಗೆ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಕನಕದಾಸರು ದೇವಾಲಯದ ಹಿಂಬದಿಯಲ್ಲಿ ನಿಂತು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಅವರ ಈ ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ಸಂತೃಪ್ತನಾದ ಶ್ರೀಕೃಷ್ಣ, ದೇಗುಲದ ಗೋಡೆ ಒಡೆದು ಕನಕದಾಸರಿಗೆ ದರ್ಶನ ನೀಡಿದನು. ಅದನ್ನು ಇಂದಿಗೂ ಕನಕನ ಕಿಂಡಿಯೆಂದೇ ಕರೆಯಲಾಗುತ್ತಿದೆ.
ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರು

ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆಗಳು ಎಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೂ ಒತ್ತುಕೊಟ್ಟ ಸಂತರು ಕನಕದಾಸರು. ಅವರು ನಾಡು ಕಂಡ ಅಪ್ರತಿಮ ದಾಸರು. ದಾಸಶ್ರೇಷ್ಠರಲ್ಲಿ ಶ್ರೇಷ್ಠರಾದವರು ಕನಕದಾಸರು. ಇಂತಹ ಕನಕದಾಸರು ಇಂದಿನ ವಿದ್ಯಮಾನಗಳನ್ನು ಐದು ಶತಮಾನಗಳ ಮುಂಚೆ ತಮ್ಮ ಕೃತಿಗಳಲ್ಲಿ ಪ್ರಸ್ತುತಪಡಿಸಿದ್ದರು. ಅವರು ರಚಿಸಿದ ಕೃತಿಗಳು ಅಂದು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಲ್ಲದೆ ಪ್ರಸ್ತುತ ದಿನಗಳಲ್ಲಿ ಸಹ ಸಮಾಜದಲ್ಲೂ ಮಾದರಿಯಾಗಿವೆ. ಕನಕದಾಸರು ಕ್ರಿ.ಶ 1609 ರಲ್ಲಿ ಕಾಗಿನೆಲೆಯಲ್ಲಿ ಇಹಲೋಕ ತ್ಯಜಿಸಿದರು. ಅವರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಗದ್ದುಗೆ ನಿರ್ಮಿಸಲಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಭಕ್ತರು ಗದ್ದುಗೆ ದರ್ಶನ ಪಡೆಯುತ್ತಾರೆ.
ದಾಸರ ಕೃತಿಗಳು

ಕನಕದಾಸರು ರಚಿಸಿದ ನಳಚರಿತ್ರೆ, ಮೋಹನತರಂಗಿಣಿ, ರಾಮಧಾನ್ಯ ಚರಿತ ಮತ್ತು ಹರಿಭಕ್ತಿಸಾರ ಕೃತಿಗಳು ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಾಗಿವೆ. ಅವರು ಕಾಗಿನೆಲೆ ಆದಿಕೇಶವನ ಅಂಕಿತನಾಮದಲ್ಲಿ ರಚಿಸಿದ ಕೀರ್ತನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಕನಕದಾಸರ ಕೀರ್ತನೆಗಳು ಮುಂಡಿಗೆಗಳು ಅಂದಿನ ಸಮಸ್ಯೆಗಳಷ್ಟೇ ಅಲ್ಲದೆ ಪ್ರಸ್ತುತ ದಿನಗಳ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ಇಂದಿನ ಸಮಸ್ಯೆಗಳ ಬಗ್ಗೆ ಕನಕದಾಸರು ಐದು ಶತಮಾನಗಳ ಹಿಂದೆಯೇ ತಮ್ಮ ಕೃತಿಗಳಲ್ಲಿ ಪರಿಹಾರ ಸೂಚಿಸಿದ್ದು ಸೋಜಿಗವಾಗಿದೆ. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ.., ತಲ್ಲಣಿಸದಿರು ಕಂಡ್ಯ ತಾಳು ಮನವೇ.., ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಸೇರಿದೆ ಹಲವು ಕಾವ್ಯಗಳು ಜನರ ಮನದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿವೆ.



















