ಬೆಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು (Union Bank of India) ದೇಶಾದ್ಯಂತ ಖಾಲಿ ಇರುವ 500 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ದೇಶಾದ್ಯಂತ ಇರುವ ಬ್ರ್ಯಾಂಚ್ ಗಳಲ್ಲಿ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮೇ 20ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕೃತ ವೆಬ್ ಸೈಟ್ ಆಗಿರುವ https://ibpsonline.ibps.in/ubisoapr25/ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಯಾವ ಹುದ್ದೆ ಎಷ್ಟು ಖಾಲಿ?
ಅಸಿಸ್ಟಂಟ್ ಮ್ಯಾನೇಜರ್ (ಕ್ರೆಡಿಟ್) ವಿಭಾಗದಲ್ಲಿ 250 ಹುದ್ದೆಗಳು ಖಾಲಿ ಇವೆ. ಸಿಎ, ಸಿಎಂಎ, ಸಿಎಸ್, ಎಂಬಿಎ, ಎಂಎಎಂಎಸ್, ಪಿಜಿಡಿಎಂ, ಪಿಜಿಡಿಬಿಎಂ, ಪದವಿ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಅಸಿಸ್ಟಂಟ್ ಮ್ಯಾನೇಜರ್ (ಐಟಿ) ವಿಭಾಗದಲ್ಲೂ 250 ಹುದ್ದೆಗಳು ಖಾಲಿ ಇವೆ. ಬಿ.ಇ/ಬಿ.ಟೆಕ್, ಎಂಸಿಎ, ಎಂ.ಎಸ್ಸಿ, ಎಂ.ಎಸ್, ಎಂ.ಟೆಕ್ ಕೋರ್ಸ್ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಕೆಲಸ ಮಾಡಿದ ಅನುಭವ ಇದ್ದವರಿಗೆ ಆದ್ಯತೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 22 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ ಇರಬೇಕು ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ ತಿಳಿಸಿದೆ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ (ಎನ್ಸಿಎಲ್) ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.
ಎಸ್ಸಿ, ಎಸ್ಟಿ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 117 ರೂಪಾಯಿ ಅರ್ಜಿ ಶುಲ್ಕವಿದೆ. ಇನ್ನು ಉಳಿದ ಎಲ್ಲ ವರ್ಗಗಳ ಅಭ್ಯರ್ಥಿಗಳು 1,180 ರೂಪಾಯಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಆನ್ ಲೈನ್ ಪರೀಕ್ಷೆ, ಗ್ರೂಪ್ ಡಿಸ್ಕಷನ್, ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 48,480 ರೂ. – 85,920 ರೂ. ವೇತನ ನೀಡಲಾಗುತ್ತದೆ.