ಬೆಂಗಳೂರು: ಬೆಂಗಳೂರು ನಗರದಲ್ಲಿ ಹಿಂದಿನ ವರ್ಷ ಸುಮಾರು 50 ಸಾವಿರಕ್ಕೂ ಅಧಿಕ ಐಟಿ ಉದ್ಯೋಗಿಗಳನ್ನು ವಜಾಗೊಳಿಸಿರುವುದರಿಂದಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ ಎಂದು ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ತ್ವರಿತ ಅಭಿವೃದ್ಧಿಯಿಂದಾಗಿ ಐಟಿ ವಲಯದಲ್ಲಿ ಸಾಮೂಹಿಕವಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಹೀಗಾಗಿ ನಗರದಲ್ಲಿ ಉದ್ಯೋಗ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ. ಉದ್ಯೋಗ ಬಿಕ್ಕಟ್ಟು ಐಟಿ ವಲಯಕ್ಕೆ ಮಾತ್ರ ಸೀಮಿತವಾಗಿರದೇ ನಗರದ ರಿಯಲ್ ಎಸ್ಟೇಟ್ ಹೂಡಿಕೆ, ಸ್ಥಳೀಯ ವ್ಯವಹಾರಗಳ ಪರಿಣಾಮ ಬೀರಲಿದೆ. ಆರ್ಥಿಕ ಸ್ಥಿರತೆಯ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಐಟಿ ವಲಯದಲ್ಲಿ ಮತ್ತಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದ್ದು, ಕಂಪನಿಗಳು ಎಐ ತಂತ್ರಜ್ಞಾನಕ್ಕೆ ಬದಲಾದಾಗ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಈ ಮೂಲಕ ಕಡಿಮೆ ವೇತನ ಪಡೆಯುವ ಉದ್ಯೋಗಿಗಳು ದುರ್ಬಲರಾಗುತ್ತಿದ್ದಾರೆ. ಇದರಿಂದಾಗಿ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರುತ್ತಿದೆ. ಟೆಕ್ ಪಾರ್ಕ್‌ಗಳು ಮತ್ತು ಕಾರ್ಪೊರೇಟ್ ಕಚೇರಿಗಳಿಗೆ ತಾಣವಾದ ಔಟರ್ ರಿಂಗ್ ರಸ್ತೆ ಬಳಿ ಇರುವವರ ಪರಿಸ್ಥಿತಿ ಮತ್ತಷ್ಟು ತೊಂದರೆ ಅನುಭವಿಸುತ್ತಿವೆ.